ಭರತನಾಟ್ಯ ಭಾರತೀಯ ಸಾಂಸ್ಕೃತಿಕ ಕಲೆಯಾಗಿದೆಯಾದರೂ ಇತ್ತೀಚಿನ ಯುವ ಪೀಳಿಗೆ ಇಂತಹ ಶಾಸ್ತ್ರೀಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಇಷ್ಟಪಡುದಿಲ್ಲ ಎಂಬ ಭಾವನೆಯನ್ನು ಈ ಬಾರಿ ಸಂಪೂರ್ಣವಾಗಿ ಬದಲಾಯಿಸಲು ಕಾತುರರಾಗಿದ್ದಾರೆ ಹಾಸನಿಯವರು.
ಬಾಗೇಪಲ್ಲಿ ಪಟ್ಟಣದಲ್ಲಿ ಹತ್ತು ದಿನಗಳಿಂದ ನಿರಂತವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಮಾಡುವ ಮೂಲಕ ಹೊಸ ದಾಖಲೆಯ ಇತಿಹಾಸವೇ ಸೃಷ್ಟಿಯಾಗಿದೆ. ಭರತನಾಟ್ಯ ಕಲಾವಿದ ಹಾಸನಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲಾಗಲು ಸತತ 228 ಗಂಟೆಗಳ ಕಾಲ ಭರತನಾಟ್ಯವನ್ನು ನಡೆಸಿಕೊಳ್ಳಲಿದ್ದಾರೆ ಎಂದು ಹಿರಿಯ ವಕೀಲರು, ಸಮಾಜ ಚಿಂತಕರೂ ಆದ ಎ ಜಿ ಸುಧಾಕರ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಟ್ಟಣದ ನೇತಾಜಿ ಸರ್ಕಲ್‌ನಲ್ಲಿ ವಾಸವಿರುವ ಹಾಸನಿ ತಾಯಿ ಲಲಿತಮ್ಮ ಹಾಗೂ ತಂದೆ ಗಂಗಾಧರ್ ಸುಮಾರು 15 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಲೇಷಿಯಾಗಳಲ್ಲಿ ಭರತನಾಟ್ಯವನ್ನು ಮಾಡುತ್ತ ಗಿನ್ನಿಸ್ ಬುಕ್, ಏಷ್ಯಾ ಬುಕ್, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನರ್ತನ ಭರತನಾಟ್ಯ ಶಾಲೆ ತೆರೆದು ಅನೇಕರಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಭರತನಾಟ್ಯದಲ್ಲಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದೆ. ಇಲ್ಲಿಂದಲೇ ಲೈವ್ ಮೂಲಕ ಇಂಗ್ಲೆಂಡ್‌ನಲ್ಲಿ ಗೋಲ್ಡ್ ಬುಕ್ ಆಫ್ ರೆಕಾರ್ಡ್ ಸದಸ್ಯರು ವೀಕ್ಷಿಸುತ್ತಾರೆ. ಇದಕ್ಕೆ ನಗರದ ಎಲ್ಲ ಜನತೆ ಸಹಕಾರ ನೀಡಬೇಕು” ಎಂದು ಹೇಳಿದರು.

ಭರತನಾಟ್ಯ ಕಲಾವಿದೆ ಹಾಸನಿ ಗಂಗಾಧರ್ ಮಾತನಾಡಿ, “ನಾನು ಮೂರು ವರ್ಷ ಮಗುವಿನಿಂದಲೇ ಭರತನಾಟ್ಯ ಪ್ರಾರಂಭ ಮಾಡಿದೆ. ಅದರೆ ಮಧ್ಯದಲ್ಲಿ ಇಷ್ಟ ಇರಲಿಲ್ಲ. ಆದರೆ ನಮ್ಮ ತಾಯಿಯ ಒತ್ತಾಯ ಸಹಕಾರದಿಂದ ನಾನು ಅನೇಕ ಪ್ರಶಸ್ತಿಗಳನ್ನ ಪಡೆದಿದ್ದೇನೆ. ಇಂದು ನನ್ನ ತಾಯಿ ಇಲ್ಲ, ನನ್ನ ತಂದೆ ಗಂಗಾಧರ ಅವರು, ಇತರೆ ಸ್ನೇಹಿತರು, ಹಿತೈಷಿಗಳು ಎಲ್ಲರೂ ಸಹಕಾರ ನೀಡಿದ್ದಾರೆ. 21ರಿಂದ 30ರ ತನಕ ಸತತ 228 ಗಂಟೆಗಳ ಕಾಲ ಭರತನಾಟ್ಯ ಮಾಡಿ ಗೋಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಮಾಡಬೇಕು. ನಮ್ಮ ಊರಿಗೆ ನಮ್ಮ ಪೋಷಕರಿಗೆ ನನಗೆ ಸಹಕರಿಸಿದ ಎಲ್ಲರಿಗೂ ಹೆಸರು ತರಬೇಕೆಂಬುದೇ ನನ್ನ ಆಸೆ. ನಿಮ್ಮೆಲ್ಲರ ಆಶೀರ್ವಾದ ಸಹಕಾರ ನನ್ನ ಮೇಲೆ ಇರಲಿ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಕೃಷಿ ಇಲಾಖೆಯ 53 ಪ್ರಯೋಗಾಲಯಗಳಿಗೆ NABL ಮಾನ್ಯತೆ: ಎನ್ ಚಲುವರಾಯಸ್ವಾಮಿ
ಒಟ್ಟಿನಲ್ಲಿ ಸತತ 228 ಗಂಟೆಗಳ ಭರತನಾಟ್ಯ ನೃತ್ಯ ಪ್ರದರ್ಶಿಸಿ ಬಾಗೇಪಲ್ಲಿ ತಾಲೂಕಿಗೆ ಇನ್ನೊಂದು ಗರಿಮೆಯನ್ನು ತಂದಿಟ್ಟ ದಿಟ್ಟ ಯುವತಿ ಹಾಸನಿಯ ಈ ಸಾಧನೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ವಿ ನಾರಾಯಣ, ಮಂಜುಳಾ, ಗಂಗಾಧರ್, ವಿಜಯ್ ಜ್ಯೋತಿ, ಸುರೇಶ್ ಸೇರಿದಂತೆ ಇನ್ನೂ ಮುಂತಾದವರು ಇದ್ದರು.