ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ. ಒಂದೆಡೆ ಖಾಸಗಿ ಶಾಲೆಗಳ ಪೈಪೋಟಿ. ಇನ್ನೊಂದೆಡೆ ಮಕ್ಕಳ ದಾಖಲಾತಿ ಕೊರತೆ. ಮೂಲ ಸೌಕರ್ಯಗಳು ಇಲ್ಲದಿರುವುದರ ಜೊತೆಗೆ ಶಿಕ್ಷಕರ ಸಂಖ್ಯೆ ಗಣನಿಯವಾಗಿ ಕಡಿಮೆ ಇರುವುದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾದರೆ, ನೇರವಾಗಿ ಸರ್ಕಾರದ ಇಚ್ಛಾಶಕ್ತಿ ಇಲ್ಲದಿರುವುದು. ಕನ್ನಡ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದುವರೆಗೆ ಪ್ರವೃತ್ತರಾಗಲೇ ಇಲ್ಲ. ಇಂತಹದರ ನಡುವೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ.
ಸರ್ಕಾರಿ ಶಾಲೆ ಎಂದರೇ ಮೂಗು ಮುರಿವರೇ ಹೆಚ್ಚು. ಸುಣ್ಣ ಬಣ್ಣ ಕಾಣದ ಗೋಡೆಗಳು. ಎಲ್ಲೆಂದರಲ್ಲಿ ಬಿರುಕು ಬಿಟ್ಟ ಕಟ್ಟಡ, ಮಳೆ ಬಂದರೆ ಸೋರುವ ಮಾಳಿಗೆ, ಕಿಟಿಕಿ ಇದ್ದರೆ ಬಾಗಿಲೇ ಇಲ್ಲ. ಬಾಗಿಲಿದ್ದರೆ ಕಿಟಕಿ ಇಲ್ಲ. ಇವೆರೆಡು ಇದ್ದರೆ ಚಿಲಕವೇ ಇಲ್ಲ ಎನ್ನುವಂತಾಗಿದೆ. ಉತ್ತಮವಾದ ಬೆಂಚು, ಖುರ್ಚಿ, ಶೌಚಾಲಯ ಯಾವುದು ಇಲ್ಲದಿರುವುದು ಪೋಷಕರಿಗೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕಾ? ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.
ಇನ್ನ ಶಾಲೆಯಲ್ಲಿ ಮಕ್ಕಳಿದ್ದಾರೆ, ಶಿಕ್ಷಕರ ಕೊರತೆ. ಕೆಲವು ಕಡೆ ಮಕ್ಕಳ ಕೊರತೆ ತೀವ್ರವಾಗಿ ಇದೇ ಅಲ್ಲಿ ಶಿಕ್ಷಕರು ಇದ್ದಾರೆ. ಮಕ್ಕಳ ಅನುಸಾರ, ತರಗತಿ ಪ್ರಕಾರ ಅಗತ್ಯವಿರುವ ವಿಷಯಗಳಿಗೆ ಭೋದನೆ ಮಾಡಲು ಶಿಕ್ಷಕರು ಇಲ್ಲ. ಇನ್ನ ಅತಿಥಿ ಶಿಕ್ಷಕರಿಗೆ ಹಲವೆಡೆ
ಶಾಲೆಗಳು ಅವಲಂಬಿತವಾಗಿವೆ. ಆದರೇ, ಅವರನ್ನು ಸರಿಯಾಗಿ ನಡೆಸಿಕೊಳ್ಳಲು ಆಗದಿರುವ ಪರಿಸ್ಥಿತಿ. ಸರಿಯಾಗಿ ಸಂಬಳ ಕೊಡಲು ಆಗದೆ ಇರುವಾಗ ಮಧ್ಯದಲ್ಲೇ ಶಾಲೆಯ ಕೆಲಸ ಬಿಟ್ಟು ಹೋಗುವ ಸ್ಥಿತಿಗಳು ಎದುರಾಗಿತ್ತಾ ಇವೆ. ಯಾವುದೇ ಭದ್ರತೆ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ, ಸ್ಥಳೀಯ ಆಡಳಿತ ಎಚ್ಚತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೇ, ಅಂತಹ ನಿಟ್ಟಿನಲ್ಲಿ ಮುಂದಾಗಿಲ್ಲ. ಅದೇ ಖಾಸಗಿ ಶಾಲೆಗಳ ಪರಿಸ್ಥಿತಿ ಬೇರೆಯದ್ದೆ ಇದೇ. ಶುಚಿತ್ವ, ಅಗತ್ಯ ಸೌಲಭ್ಯ, ಶಿಕ್ಷಕರ ಸಂಖ್ಯೆ, ಒಳ ಹೊಕ್ಕರೆ ಬೇರೆ ಮಾದರಿಯಲ್ಲಿ ತೆರೆದುಕೊಳ್ಳುವ ದಾಟಿ. ಪೋಷಕರನ್ನು ಯಾವೆಲ್ಲಾ ರೀತಿಯಲ್ಲಿ ಸುಲಿಗೆ ಮಾಡುತ್ತಾರೆ ಎನ್ನುವುದೆಲ್ಲ ಬೇರೆ ಬೇರೆ ಆಯಾಮಗಳ ಚರ್ಚೆಯ ವಿಚಾರವಾಗಿದ್ದರು ಅಪ್ರಸ್ತುತಿಯಲ್ಲಿ ಮಾತನಾಡಬೇಕಿದೆ.
ಗೊತ್ತಿದ್ದರೂ ಸಹ ಖಾಸಗಿ ಶಾಲೆ ಮೇಲಿನ ವ್ಯಾಮೋಹಕ್ಕೆ ಮಾರು ಹೋಗುತ್ತಿದ್ದಾರೆ ಪೋಷಕರು ಎಂದರೇ ಸರ್ಕಾರದ ಹೊಣಗೇಡಿತನ. ಸರ್ಕಾರಿ ಶಾಲೆ ಹೊಕ್ಕರೆ ತೂತು ಬಿದ್ದ ನೆಲ, ಮುರಿದು ಬಿದ್ದ ಪಿಠೋಪಕಾರಣಗಳು. ಬಣ್ಣ ಕಂಡು ಎಷ್ಟು ವರ್ಷಗಳು ಕಳೆದವೋ ಎನ್ನುವಂತಿದೆ. ಅದೇ ಖಾಸಗಿ ಶಾಲೆ ಪೋಷಕರ ಮನ ಸೆಳೆಯಲು ಯಾವುದೇ ಖಾಸಗಿ ಹೋಟೆಲ್, ರೆಸಾರ್ಟ್ ಗೂ ಕಡಿಮೆ ಇರದಂತೆ ನೋಡಿಕೊಂಡಿರುತ್ತೆ. ಅದನ್ನೇ ಬಂಡವಾಳ ಮಾಡಿಕೊಂಡು ತನ್ನ ಸಂಸ್ಥೆಯನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವೇ ಬೆಂಬಲಿಸುವಂತೆ ತೋರುತ್ತಿದೆ. ಪ್ರಾಬಲ್ಯರ ಕಯ್ಯಾಳುಗಳಾಗಿ ಕೆಲಸ ಮಾಡುತ್ತಿರುವುದೇ ಇದಕ್ಕೆಲ್ಲ ಕಾರಣ. ರಾಜಕೀಯ, ಸರ್ಕಾರದಲ್ಲಿರುವವರದ್ದೇ ಸಾಕಷ್ಟು ಖಾಸಗಿ ವಿದ್ಯಾಸಂಸ್ಥೆಗಳು ಇರುವಾಗ, ತಮ್ಮದರ ಜೊತೆಗೆ ಇತರರನ್ನು ಸಂತೃಪ್ತಿಗೊಳಿಸುವ ತಂತ್ರಗಾರಿಕೆ.

ಅದೇ ಸರ್ಕಾರ ಎಲ್ಲಾ ಯೋಜನೆಗಿಂತ, ಗ್ಯಾರೆಂಟಿ ಯೋಜನೆಗಳ ಜೊತೆಗೆ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕಿತ್ತು. ಶಿಕ್ಷಣ ಅತಿ ಮುಖ್ಯವಾದದ್ದು ಎನ್ನುವ ಆಲೋಚನೆ ಸಹ ಮಾಡುತ್ತಿಲ್ಲ. ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ನಾಡಿನ ಶೈಕ್ಷಣಿಕ ಚಿಂತಕರು, ಬುದ್ದಿ ಜೀವಿಗಳು ಧ್ವನಿ ಸಹ ಮಾಡದಿರುವುದು ನಮ್ಮೆಲ್ಲರ ದುಸ್ಥಿತಿಗೆ ಕಾರಣ. ಎಲ್ಲದಕ್ಕೂ ಹೋರಾಟ ಮಾಡುವ ನಾವುಗಳು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಾ ಇಲ್ಲ. ನಮ್ಮ ಹಕ್ಕಿಗಾಗಿ, ನಮ್ಮ ಮಕ್ಕಳ ಉಳಿವಿಗಾಗಿ ಕಟ್ಟಿಬದ್ದರಾಗಿ ಉಳಿದಿಲ್ಲ. ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರ ಹೊಣೆಗಾರಿಕೆಗೆ ತಕ್ಕಂತೆ ಜವಾಬ್ದಾರಿಯುತ ನಿಲುವಿನಲ್ಲಿ ಎಡವಿದ್ದಾರೆ.
ಪೋಷಕರಿಗೆ ಖಾಸಗಿ ಶಾಲೆ ಕಬ್ಬಿಣದ ಕಡಲೆ ಎನ್ನುವುದು ಗೊತ್ತಿದ್ದರೂ ಸಹ ಸೇರಿಸುತ್ತಿದ್ದಾರೆ. ಆ ಸಾಮರ್ಥ್ಯ ಇಲ್ಲ, ಹಣ ಹೊಂದಿಕೆ ಕಷ್ಟ ಇದ್ದರು ಹೇಗಾದರೂ ಸಾಲ ಸೋಲ ಮಾಡಿ ಹೊಂದಿಸಿ ಶುಲ್ಕ ಭರಿಸುತ್ತಾರೆ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನಮ್ಮಂತೆ ಆಗಬಾರದು ವಿದ್ಯಾವಂತರಾಗಬೇಕು ಎನ್ನುವ ನಿಲುವು, ಕೆಲವೆಡೆ ಪ್ರತಿಷ್ಠೆಯು ಇರಬಹುದು, ಇನ್ನ ಕೆಲವೆಡೆ ಮಕ್ಕಳ ಸುರಕ್ಷತೆಗಾಗಿಯೂ ಒಟ್ಟಿನಲ್ಲಿ ಖಾಸಗಿ ಶಾಲೆಗಳ ಮೋಹಕ್ಕೆ ಸಿಲುಕಿದ್ದಾರೆ.

“ಅದೇ ಸರ್ಕಾರ ಉತ್ತಮವಾದ ವ್ಯವಸ್ಥೆ ಕಲ್ಪಿಸಿ, ಆಗತ್ಯ ಸವಲತ್ತು ಪೂರೈಸಿದ್ದರೆ ಇವತ್ತು ಕನ್ನಡ ಶಾಲೆ ಉಳಿಸಿ ಎನ್ನುವ ಪ್ರಮೇಯ ಬಹುಶಃ ಬರುತ್ತಾ ಇರಲಿಲ್ಲ. ಆದರೇ, ಆಗಿದ್ದೇನು ಸರ್ಕಾರಗಳ ಕುಂಟು ನೆಪ. ಖಾಸಗಿ ಶಾಲೆಗಳಿಗೆ ತಾವೇ ಎಲ್ಲೆಂದರಲ್ಲಿ ತೆರೆಯಲು ಪರವಾನಿಗೆ ನೀಡುತ್ತಿರುವಾಗ ಕನ್ನಡ ಶಾಲೆಯ ಉಳಿವಿನ ಪ್ರಶ್ನೆ ಬಹುವಾಗಿ ಕಾಡುತ್ತದೆ. ಒಂದು ಹಂತದಲ್ಲಿ ಕನ್ನಡ ಶಾಲೆಗೆ ಕೊನೆ ಮೊಳೆ ಹೊಡೆದಿದ್ದು ಸರ್ಕಾರವಾದರೆ, ಮಣ್ಣು ಮಾಡಲು ಹೊರಟಿರುವುದು ಪೋಷಕರು. ಶತಮಾನೋತ್ಸವ ಕಂಡಿರುವ ಶಾಲೆಗಳು ಮುಚ್ಚುತ್ತಿವೆ. ಅದೇ ಶಾಲೆಯಲ್ಲಿ ಓದಿ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಹೊಂದಿ, ಅಧಿಕಾರ, ಹಣ, ಹೆಸರು ಮಾಡಿದವರು ಸಹ ಕಣ್ಣೆತ್ತಿಯು ಸಹ ನೋಡುತಿಲ್ಲ”.
“ಯಾವುದಕ್ಕಾಗಿ ಹೋರಾಟ ಮಾಡಬೇಕಿತ್ತು? ಬಾಬಾ ಸಾಹೇಬರ ಆಶಯ ಯಾವುದಾಗಿತ್ತೋ ಅಂತಹ ನಿಟ್ಟಿನಲ್ಲಿ ನಡೆಯದೇ, ಶಿಕ್ಷಣ ಕ್ಷೇತ್ರವೂ ವ್ಯಾಪರೀಕರಣಗೊಂಡಿದ್ದು ದುರಂತ, ಅಪಾಯ. ಸಮಾಜಿಕವಾಗಿ ಅತ್ಯಗತ್ಯವಾಗಿ ದೇಶದ ಪ್ರತಿಯೊಬ್ಬರಿಗೂ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಇರಬೇಕಿತ್ತು. ಜೊತೆಗೆ ಇಂದಿನ ದಿನಮಾನಗಳ ಅನುಸಾರ, ಆಧುನಿಕತೆಯ ಭಾಗವಾಗಿ ಶಿಕ್ಷಣದ ಜೊತೆಗೆ ಅಗತ್ಯತೆಗಳನ್ನು ಸಹ ಪೂರೈಸಿಕೊಳ್ಳುತ್ತಾ ಸರ್ಕಾರ ಇದಕ್ಕಾಗಿ ಹೆಚ್ಚಿನ ಆದ್ಯತೆಯನ್ನಾಗಿಸಿ ಕಾರ್ಯಪ್ರವೃತವಾಗಬೇಕಿತ್ತು. ಆದರೇ, ಅಂತಹ ಸಂದರ್ಭ ಇದುವರೆಗೆ ಕೂಡಿ ಬಂದಿಲ್ಲ”.

ಇಂತಹದರ ನಡುವೆ 1948 ರಲ್ಲಿ ಸ್ಥಾಪನೆಯಾಗಿ. ಹಿರಿಯ ಪ್ರಾಥಮಿಕ ಶಾಲೆಯೊಟ್ಟಿಗೆ ಒಂದೇ ಒಂದು ಕೊಠಡಿಯಲ್ಲಿ ಪ್ರಾರಂಭವಾದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ. ಇಂದು ಊರಿನವರ ನೆರವು, ಗ್ರಾಮ ಪಂಚಾಯತಿ, ಹಿರಿಯ ವಿದ್ಯಾರ್ಥಿಗಳು, ಪೋಷಕರ ನೆರವಿನಿಂದ ಜೊತೆಗೆ ಮುಖ್ಯ ಶಿಕ್ಷಕರಾದ ಎನ್. ಎಸ್. ನಾಗಶೆಟ್ಟಿ ಅವರ ಇಚ್ಛಾಶಕ್ತಿಯಿಂದ ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿರದಂತೆ ಸ್ವಂತ ಕಟ್ಟಡದಲ್ಲಿ, ಉತ್ತಮವಾದ ಫಲಿತಾಂಶದೊಡನೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದಿಲ್ಲಿಗೆ 90 ವರ್ಷ ಸಂದಿದೆ.
“ಹಿರಿಯ ಪ್ರಾಥಮಿಕ ಶಾಲೆಯೊಡನಿದ್ದ ಪ್ರೌಢಶಾಲೆ ಸಮುದಾಯದ ಒಳಗೊಳ್ಳುವಿಕೆಯಿಂದ, ದಾನಿಗಳು, ಗ್ರಾಮ ಪಂಚಾಯತಿ ನೆರವಿನಿಂದ 2018 ರಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಆಧ್ಯತೆ. ಮುಖ್ಯ ಶಿಕ್ಷಕರಾದ ಎನ್. ಎಸ್. ನಾಗಶೆಟ್ಟಿ ಪಿರಿಯಾಪಟ್ಟಣ ಜಿಜೆಸಿಪಿಯಿಂದ ವರ್ಗಾವಣೆಯಾಗಿ ಬಂದು. ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಮಾಡಿದರು. ಸುತ್ತಮುತ್ತಲಿನ ಗ್ರಾಮಗಳಾದ ಕೊತ್ತವಳ್ಳಿ, ಕೊಪ್ಪಲು, ಮಾಳೆಗೌಡನ ಕೊಪ್ಪಲು, ಕಗ್ಗಲೀ ಕೊಪ್ಪಲು, ತಂದ್ರೆ, ಚಿಕ್ಕ ಮಳಲಿ, ಮಾದೇಶ್ವರ ಮಠ, ಸಂಗರ ಶೆಟ್ಟಿಹಳ್ಳಿ, ಕಿತ್ತೂರು, ಚನ್ನಂಗೆರೆ ಭಾಗದಿಂದ ಮಕ್ಕಳು ಪ್ರೌಢಶಾಲೆಗೆ” ಬರುತಿದ್ದಾರೆ.

“ಕಿತ್ತೂರು, ಚನ್ನಂಗೆರೆಯಲ್ಲಿ ಪ್ರೌಡಶಾಲೆ ಇದ್ದರು ಮಕ್ಕಳು ಅತ್ತಿಗೋಡು ಶಾಲೆಗೆ ಹೋಗುವ ಬಯಕೆ. ಕಾರಣ ವ್ಯವಸ್ಥಿತವಾದ ಶಿಕ್ಷಣ ಜೊತೆಗೆ ಯಾವುದೇ ಕೊರತೆ, ನ್ಯೂನ್ಯತೆ ಇಲ್ಲದಿರುವುದು. ಈ ಶಾಲೆಯಲ್ಲಿ ಪಾಠವಷ್ಟೇ ಅಲ್ಲದೆ ಅಳಿವಿನಂಚಿನಲ್ಲಿರುವ ಡೊಳ್ಳು ಕುಣಿತ, ವೀರಗಾಸೆ, ಪೂಜಾಕುಣಿತ, ಕಂಸಾಳೆ, ಜಾನಪದ ನೃತ್ಯಗಳಿಗೆ ಉತ್ತೇಜನ ನೀಡುತ್ತಿರುವುದು ವಿಶೇಷವಾಗಿದೆ. ಈ ಶಾಲೆಯಲ್ಲಿ ಕಲಿತ ಹಲವು ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜೊತೆಗೆ ಕಳೆದ ಸೀಸನ್ ಝೀ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಇದೇ ಶಾಲೆಯ ವಿದ್ಯಾರ್ಥಿ ಆಯ್ಕೆ ಕೂಡ ಆಗಿದ್ದ.”

ಸುಮಾರು ಒಂದೂವರೆ ಎಕರೆ ವಿಸ್ತಾರದಲ್ಲಿರುವ ಶಾಲೆಗೆ ಗ್ರಾಮ ಪಂಚಾಯತಿ ₹1ಕೋಟಿ ರೂಪಾಯಿ ಹಣ ಖರ್ಚು ಮಾಡಿ ಕಂಪೌಂಡ್ ನಿರ್ಮಿಸಿಕೊಟ್ಟಿದೆ. ಹಲವಾರು ದಾನಿಗಳು ಕಂಪ್ಯೂಟರ್ ಕೊಡಿಸಿದ್ದಾರೆ. ಉತ್ತಮವಾದ ಲ್ಯಾಬ್ ಹೊಂದಿದೆ. ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್ ಜೊತೆಗೆ ಸುಸರ್ಜಿತವಾದ ಆಟದ ಮೈದಾನ, ಕುಡಿಯಲು ಶುದ್ಧವಾದ ಕುಡಿಯುವ ನೀರಿನ ಘಟಕ. ಶಾಲೆಗೆ ಯಾವುದೇ ಕೊರತೆ ಆಗದ ನಿಟ್ಟಿನಲ್ಲಿ ಯುಪಿಎಸ್ ಜೊತೆಗೆ ಜನರೇಟರ್ ವ್ಯವಸ್ಥೆ ಸಹ ಇರುವುದು. ಶಾಲೆಯ ಉತ್ತಮಸ್ಥಿತಿಗೆ ಪೂರಕವಾದ ಅಂಶ.

ಪ್ರಮುಖವಾಗಿ ಶಾಲಾ ಹೊರಾಂಡದಲ್ಲಿ, ಸುತ್ತಮುತ್ತಲಿನಲ್ಲಿ ಗಿಡ, ಮರಗಳನ್ನು ನೆಟ್ಟು ಉದ್ಯಾನವನವನ್ನಾಗಿಸಿರುವುದು. ಶಾಲೆಯಲ್ಲಿಯೇ ತರಕಾರಿ ಬೆಳೆದು ಬಿಸಿಯೂಟಕ್ಕೆ ಬಳಕೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳಿಗೆ ಕೃಷಿಯ ಅನುಭವ ನೀಡುವುದು ಇದರ ಉದ್ದೇಶವಾಗಿದೆ. ಅಚ್ಚುಕಟ್ಟಾದ ಬಿಸಿಯೂಟ ಕೋಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ವೇದಿಕೆ ಹಾಗೆ ಮುಂಭಾಗದಲ್ಲಿ ಕೂರಲು ಸೂಕ್ತವಾದ ವ್ಯವಸ್ಥೆ ಮಾಡಿರುವುದು. ಸ್ಥಳೀಯರಿಂದಲೇ ಕನ್ನಡ ಶಾಲೆಯೊಂದು ಉತ್ತಮವಾದ
ರೀತಿಯಲ್ಲಿ ರೂಪುಗೊಂಡಿದೆ. ಇಲ್ಲಿ ಸರ್ಕಾರದ ನೆರವು ಯಾವುದು ಇಲ್ಲ. ಯಾವುದನ್ನು ಕೋರಿಲ್ಲ.

ಎಲ್ಲಾ ಕನ್ನಡ ಶಾಲೆಗಳಲ್ಲಿ ಕೊರತೆ ಇರುವಂತೆ ಇಲ್ಲಿಯೂ ಸಹ ಒಂದಷ್ಟು ಕೊರತೆಗಳು ಇವೆ. ಇದಕ್ಕಾಗಿ ನೆರವಿನ ಅಗತ್ಯತೆಯೂ ಇದೇ. ದೈಹಿಕ ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಡಿ ದರ್ಜೆ ನೌಕರರು, ಕಚೇರಿ ಸಿಬ್ಬಂದಿ ಇಲ್ಲ. ಉತ್ತಮವಾದ ಶಾಲೆಗೆ ಇನ್ನಷ್ಟು ಕೊಠಡಿಗಳ ಅಗತ್ಯವಿದೆ. ಮುಖ್ಯ ಶಿಕ್ಷಕರಾಗಿ ಎನ್. ಎಸ್. ನಾಗಶೆಟ್ಟಿ, ಗಣಿತ ಶಿಕ್ಷಕರಾಗಿ ಹೆಚ್. ಎನ್. ರಜನಿಕಾಂತ್, ಕನ್ನಡ ಹಾಗೂ ಜಾನಪದ ಶಿಕ್ಷಕರಾಗಿ ದೇವರಾಜ್, ಸಮಾಜ ಶಿಕ್ಷಕರಾಗಿ ಸಿ. ಹೆಚ್. ಸ್ವಾಮಿ, ತೋಟಗಾರಿಕೆ ಶಿಕ್ಷಕರಾಗಿ ಮಾಧನಾಯಕ, ಅತಿಥಿ ಶಿಕ್ಷಕರಾದ ಹಿಂದಿ ಶಿಕ್ಷಕಿ ಪುಷ್ಪಲತಾ, ವಿಜ್ಞಾನ ಶಿಕ್ಷಕರಾಗಿ ಚೆಲುವರಾಜು, ಇಂಗ್ಲಿಷ್ ಶಿಕ್ಷಕರಾಗಿ ರವಿ ಹಾಗೂ ಇತ್ತೀಚಿಗೆ ಕಚೇರಿ ನಿರ್ವಹಣೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ಬಿ. ಜಿ. ಇಂದಿರಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಅರಸು ಮರೆತ ಸರ್ಕಾರ; ಬೆಟ್ಟದತುಂಗ, ಕಲ್ಲಹಳ್ಳಿ ಗ್ರಾಮಗಳ ದತ್ತು ಪಡೆದಿದ್ದ ಸಿಎಂ ಸಿದ್ದರಾಮಯ್ಯ

ಈ ಶಾಲೆಯಲ್ಲಿನ ಶಿಕ್ಷಕರು ಯಾವುದೇ ಕೆಲಸ ಆಗಲಿ, ಯಾವುದೇ ಸಮಯ ಆಗಲಿ ಶಾಲಾಭಿವೃದ್ಧಿಗೆ ನೆರವಾಗಿದ್ದಾರೆ. ಸ್ವಂತ ಹಣ ವ್ಯಯಿಸುವುದರ ಜೊತೆಗೆ ಕೊರತೆ ಇರುವ ಪಠ್ಯ ಭೋದನೆ, ಶಾಲಾ ಸುಚಿತ್ವ, ನಿರ್ವಹಣೆ ಎಲ್ಲಾ ಕೆಲಸದಲ್ಲಿಯೂ ಶಾಲಾ ಮುಖ್ಯಪಾಧ್ಯಾಯರ ಕೈ ಬಲ ಪಡಿಸಿರುವುದು ಶಾಲಾ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಮ ಪಂಚಾಯತಿ ಕೊಡುಗೆ, ಗ್ರಾಮಸ್ಥರ ಬೆಂಬಲ ಬಹುಮುಖ್ಯವಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ

ಇದೇ ಶಾಲೆ ವ್ಯಾಪ್ತಿಯಲ್ಲಿರುವ, ಕಿತ್ತೂರಿನವರೇ ಆದ ಪಿರಿಯಾಪಟ್ಟಣ ಶಾಸಕರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮತ್ತು ರೇಷ್ಮೆ, ಪಶು ಸಂಗೋಪನ ಸಚಿವರಾದ ಕೆ. ವೆಂಕಟೇಶ್ ಆವರು ಅತ್ತಿಗೋಡು ಪ್ರೌಢಶಾಲೆಗೆ ಭೇಟಿ ನೀಡಿ, ಕನ್ನಡ ಶಾಲೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಪೂರಕವಾಗಿ ನೆರವಿಗೆ ಧಾವಿಸಬೇಕಿದೆ. ಕನ್ನಡ ಶಾಲೆ ಉಳಿಸಿಕೊಳ್ಳಲು ಪಿರಿಯಾಪಟ್ಟಣ ತಾಲ್ಲೂಕಿನ ಸಹೃದಯಿಗಳು ಹಾಗೂ ತಾಲ್ಲೂಕು ಶಿಕ್ಷಣ ಇಲಾಖೆ ಜೊತೆಗೂಡಿ ಉತ್ತಮವಾದ ಶಾಲೆಗೆ ಇನ್ನಷ್ಟು ಶಿಕ್ಷಕರನ್ನು, ಕೊಠಡಿ ನಿರ್ಮಾಣಕ್ಕೆ ನೆರವಿನ ಹಸ್ತ ಚಾಚುವುದರ ಮೂಲಕ ಮುಂದಾಗಬೇಕಿದೆ ಎನ್ನುವುದು ಈದಿನ. ಕಾಮ್ ಮನವಿ.