ವ್ಯಾಪಕ ಮಳೆಯಿಂದ ಔರಾದ್ ಕ್ಷೇತ್ರದಲ್ಲಿ ರೈತರು ಬೆಳೆದಿದ್ದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದೆ. ರೈತರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ರೈತರು ಯಾವುದೇ ಕಾರಣಕ್ಕೂ ಹೆದರಬಾರದು ಎಂದು ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ ಶಿಂಧೆ ಭರವಸೆ ನೀಡಿದರು.
ತಾಲೂಕಿನ ಮಣಿಗೆಂಪುರ, ಧೂಪತಮಹಾಗಾಂವ, ಬಾಚೆಪಳ್ಳಿ, ಬಾಬಳಿ, ಕೌಠಾ(ಕೆ), ಕೌಠಾ (ಬಿ), ಹೆಡಗಾಪೂರ, ನಿಟ್ಟೂರ(ಕೆ), ನಿಟ್ಟೂರ (ಬಿ), ರಕ್ಷಾಳ, ರಕ್ಷಾಳ (ಬಿ) ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿಗೀಡಾದ ಬೆಳೆ ವೀಕ್ಷಿಸಿ, ರೈತರಿಗೆ ಧೈರ್ಯ ತುಂಬಿದರು.
ಕೃಷಿ ಕ್ಷೇತ್ರದ ಸುಧಾರಣೆಗೆ ಅತಿ ಹೆಚ್ಚು ಆದ್ಯತೆ ನೀಡುವುದು ಕಾಂಗ್ರೆಸ್ ಸರ್ಕಾರ. ಅಧಿಕಾರಿಗಳು ಶೀಘ್ರದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಔರಾದ್ ಮತಕ್ಷೇತ್ರದ ವಿವಿಧ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಅವಲೋಕನ ಮಾಡಲಾಗುತ್ತಿದೆ. ಅತಿವೃಷ್ಟಿ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿದ್ದಾರೆ. ನಾನು ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಔರಾದ್ ಹಾಗೂ ಕಮಲನಗರ ತಾಲೂಕುಗಳಿಗೆ ಪರಿಹಾರ ಒದಗಿಸಲು ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆʼ ಎಂದರು.
ಭಾರಿ ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಕೆರೆ, ಸೇತುವೆ, ಮನೆಗಳಿಗೆ ಹಾನಿಯಾಗಿದೆ. ಇನ್ನು ಮಾಂಜ್ರಾ ನದಿ ಪಾತ್ರದ ಜಮೀನು ಸಂಪೂರ್ಣ ಜಲಾವೃತಗೊಂಡಿದ್ದು, ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ. ಇದರಿಂದ ಹಿಂಗಾರು ಬೆಳೆಯೂ ಬೆಳೆಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ನೆರವಿಗೆ ಸರ್ಕಾರ ಧಾವಿಸಿ ವಿಶೇಷ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಪತ್ರ ಸಲ್ಲಿಸುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ ಜಿಲ್ಲೆಯ ಅತಿವೃಷ್ಟಿ ಪರಿಹಾರಕ್ಕೆ ಸಿಎಂ ₹50 ಕೋಟಿ ಅನುದಾನ ನೀಡಿದ್ದಾರೆ : ಸಚಿವ ರಹೀಂ ಖಾನ್
ಪ್ರಮುಖರಾದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚನ್ನಪ್ಪಾ ಉಪ್ಪೆ, ಮುಖಂಡರಾದ ರಾಮಣ್ಣಾ ಒಡೆಯಾರ, ಶಿವರಾಜ ದೇಶಮುಖ, ಶ್ರೀಮಂತ ಬಿರಾದಾರ್, ಹಣಮಂತ ಪಾಟೀಲ್, ಜಾನಸನ್ ಸೇರಿದಂತೆ ಮತ್ತಿತರರು ಇದ್ದರು.