ಶಿಕ್ಷಕಿಯೊಬ್ಬರ 2 ಸಾವಿರ ರೂ. ಕಳ್ಳತನವಾಗಿದೆ ಎಂದು ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಶಿಕ್ಷಕಿಯರು ಪರಿಶೀಲನೆ ನಡೆಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯ ಕದಾಂಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಫ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ದಿವ್ಯಾ ಬಾರಕೇರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಾರ್ಚ್ 16ರಂದು ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.
ಮಾರ್ಚ್ 14ರಂದು ಗ್ರಾಮದ ಕದಾಂಪೂರ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಇವರ 2 ಸಾವಿರ ಹಣ ಕಳೆದಿತ್ತು. ಆಗ ಕನ್ನಡ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯಶಿಕ್ಷಕ ಇತರೆ ಶಿಕ್ಷಕರು 10ನೇ ತರಗತಿಯ ನಾಲ್ವರು, ಎಂಟನೇ ತರಗತಿಯ ದಿವ್ಯಾ ಮೇಲೆ ಸಂಶಯ ಪಟ್ಟಿದ್ದರು.
ಹಣ ಯಾರು ಕಳ್ಳತನ ಮಾಡಿದ್ದೀರಿ ಕೊಡಿ ಎಂದು ಗದರಿಸಿದ್ದರು. ಸಾಲದು ಎಂಬಂತೆ ಸಮವಸ್ತ್ರ ಬಿಚ್ಚಿಸಿ, ಪರಿಶೀಲನೆ ಕೂಡ ಮಾಡಿದ್ದಾರೆ. ಮೇಲಾಗಿ ಹಣ ಕೊಡದಿದ್ದರೆ ಟಿ.ಸಿ ಕೊಟ್ಟು ಮನೆಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅವಮಾನ ತಾಳದೆ ಎಂಟನೇ ತರಗತಿ ವಿದ್ಯಾರ್ಥಿನಿ ದಿವ್ಯಾ ನಿನ್ನೆ (ಮಾ.16) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ದಿವ್ಯಾ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗಳ ಸಾವಿಗೆ ಶಿಕ್ಷಕಿ ಜಯಶ್ರೀ ಕಾರಣ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಾಲಕಿಯ ಕುಟುಂಬ ಆಗ್ರಹಿಸಿದೆ.
ಈ ಬಗ್ಗೆ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯ ಶಿಕ್ಷಕ ಕೆ.ಎಚ್. ಮುಜಾವರ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು (ಎಫ್‌ಐಆರ್) ದಾಖಲಾಗಿದೆ.
ಮಾರನೇ ದಿನ ಶಾಲೆಯ ಲ್ಯಾಬ್‌ನಲ್ಲಿ ಕಳೆದಿದ್ದ ಹಣ ಸಿಕ್ಕಿದೆ ಎಂದು ತಿಳಿದು ಬಂದಿದೆ. ವಿನಾಕಾರಣ ಸಂಶಯಪಟ್ಟು ಒಂದು ಜೀವ ಹೋಗಲು ಶಿಕ್ಷಕಿ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ರಮ್ಯಾ ಮಾನಹಾನಿ | ಸುವರ್ಣ ನ್ಯೂಸ್ , ವಿಶ್ವೇಶ್ವರ್ ಭಟ್ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಬಿ.ಕೆ. ನಂದನೂರು, ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ಶಿಕ್ಷಕಿಯರು ವಿದ್ಯಾರ್ಥಿನಿಯರ ಈ ರೀತಿ ಅವಮಾನ ಮಾಡಿದ್ದೇ ಆದರೆ ಖಂಡಿತ ಸಹಿಸೋದಕ್ಕೆ ಸಾಧ್ಯವಿಲ್ಲ. ನಾಳೆ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
