ತೋಟಗಾರಿಕೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರೈತರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2026ರ ತೋಟಗಾರಿಕೆ ಮೇಳದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ಮುಂದಾಗಿದೆ.
ಬಾಗಲಕೋಟೆ ನಗರದ ಉದ್ಯಾನಗಿರಿ ಆವರಣದಲ್ಲಿ ಡಿಸೆಂಬರ್ 23ರಿಂದ 25ರವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ನಡೆಯಲಿದ್ದು, ವಿಶ್ವವಿದ್ಯಾಲಯದ ವ್ಯಾಪ್ತಿಯ 25 ಜಿಲ್ಲೆಗಳಿಂದ ತಲಾ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಹಾಗೂ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಮಹಿಳೆಯನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಶಸ್ತಿಗೆ ಅರ್ಹರಾಗಿರುವ ಆಸಕ್ತರು ತಮ್ಮ ತೋಟಗಾರಿಕೆ ಸಾಧನೆಗಳ ಸಂಪೂರ್ಣ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ದಾಖಲಿಸಿ, ಸಾಧನೆಗಳನ್ನು ದೃಢೀಕರಿಸುವ ಅಗತ್ಯ ದಾಖಲೆಗಳು ಹಾಗೂ ಉತ್ತಮ ಗುಣಮಟ್ಟದ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಅಗತ್ಯ ಮಾಹಿತಿಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ, ತೋಟಗಾರಿಕೆ ಮಹಾವಿದ್ಯಾಲಯ ಬಾಗಲಕೋಟೆ ಅಥವಾ ವಿಸ್ತರಣಾ ನಿರ್ದೇಶನಾಲಯದಿಂದ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 30, 2026ರೊಳಗೆ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆಗೆ ತಲುಪಿಸಬೇಕು. ಅರ್ಜಿ ಸಲ್ಲಿಸುವವರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಯಾವುದೇ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಅಥವಾ ಐಸಿಎಆರ್ ಪ್ರಶಸ್ತಿಯನ್ನು ತಮ್ಮ ಹೆಸರಿನಲ್ಲಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು ಎಂಬ ಷರತ್ತು ವಿಧಿಸಲಾಗಿದೆ.
ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲಿಸಲಿದೆ. ಅರ್ಹತೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಕೈಗೊಂಡು, ಆಯ್ಕೆಯಾದ ಮೂರು ಕ್ಷೇತ್ರಗಳಿಗೆ ಮಾತ್ರ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಶಸ್ತಿ ಕುರಿತ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಶಾಂತಪ್ಪ ಟಿ. (ಮೊ. 9449384950) ಅಥವಾ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶ್ರೀಪಾದ ವಿಶ್ವೇಶ್ವರ (ಮೊ. 9448344103) ಅವರನ್ನು ಸಂಪರ್ಕಿಸಬಹುದು.






