ಎದೆಯ ಮಧ್ಯಭಾಗದಲ್ಲಿ ಬೆಳೆದು ಹೃದಯದ ಮೇಲೆ ತೀವ್ರ ಒತ್ತಡ ಉಂಟುಮಾಡುತ್ತಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಬಾಗಲಕೋಟೆಯ ಹಾಲಮ್ಮ ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರ ತಂಡವು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆಗೆದುಹಾಕಿದೆ. 73 ವರ್ಷದ ವೃದ್ಧರೊಬ್ಬರಿಗೆ ನೆರವೇರಿಸಲಾದ ಈ ಅಪರೂಪದ ಶಸ್ತ್ರಚಿಕಿತ್ಸೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಮಟ್ಟದ ಎದೆಗೂಡಿನ ವೈದ್ಯಕೀಯ ಸೇವೆಗಳ ಲಭ್ಯತೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ.
ರೋಗಿಯು ಕಳೆದ ಕೆಲವು ದಿನಗಳಿಂದ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆ ನಡೆಸಿದಾಗ, ಎದೆಯ ಮಧ್ಯಭಾಗದ ‘ಮೀಡಿಯಾಸ್ಟಿನಮ್’ (Mediastinum) ಪ್ರದೇಶದಲ್ಲಿ ಬೃಹತ್ ಗಡ್ಡೆ ಬೆಳೆದಿರುವುದು ಮತ್ತು ಅದು ಹೃದಯದ ಮೇಲೆ ತೀವ್ರ ಒತ್ತಡ ಹೇರುತ್ತಿರುವುದು ಪತ್ತೆಯಾಗಿತ್ತು. ಕಳೆದ ಆರು ತಿಂಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಲೆದಾಡಿದ್ದರೂ, ಗಡ್ಡೆಯ ಸಂಕೀರ್ಣತೆಯ ಕಾರಣದಿಂದ ಶಸ್ತ್ರಚಿಕಿತ್ಸೆ ನಡೆಸಿರಲಿಲ್ಲ.
ನಂತರ ಹಾಲಮ್ಮ ಕೆರೂಡಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದ ರೋಗಿಗೆ ವೈದ್ಯರು ಕೂಲಂಕಷ ಪರೀಕ್ಷೆಗಳನ್ನು ನಡೆಸಿ, ಅತ್ಯಂತ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆಗೆ ಮುಂದಾದರು. ಸುಮಾರು 25 x 20 x 15 ಸೆಂಟಿಮೀಟರ್ ಅಳತೆಯ ಬೃಹತ್ ಗಡ್ಡೆಯನ್ನು ವೈದ್ಯರು ಬೇರ್ಪಡಿಸಿದರು. ಗಡ್ಡೆಯು ಶ್ವಾಸಕೋಶಗಳು, ಹೃದಯ ಹಾಗೂ ಪ್ರಮುಖ ರಕ್ತನಾಳಗಳ ಸೂಕ್ಷ್ಮ ರಚನೆಗಳಿಗೆ ಅಂಟಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನಿಂದ ಕೂಡಿದ್ದು, ಸುಮಾರು ಆರು ಗಂಟೆಗಳ ಕಾಲ ಮುಂದುವರಿಯಿತು. ಯಾವುದೇ ಪ್ರಮುಖ ತೊಡಕುಗಳಿಲ್ಲದೆ ಯಶಸ್ವಿಯಾಗಿ ಗಡ್ಡೆಯನ್ನು ತೆರವುಗೊಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಯಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಹಿರಿಯ ವೈದ್ಯರಾದ ಡಾ. ಮಧು ವೈ. ಸಿ., ಡಾ. ನಾಗರಾಜ್ ಜಿ. ಎನ್. ಹಾಗೂ ಅವರ ತಂಡ ನೆರವೇರಿಸಿದರೆ, ಅರಿವಳಿಕೆ ನಿರ್ವಹಣೆಯ ಜವಾಬ್ದಾರಿಯನ್ನು ಡಾ. ಲತಿಕಾ ವಹಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ರೋಗಿ ಈಗ ಸಂಪೂರ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಬಸವೇಶ್ವರ ಬ್ಯಾಂಕ್ ರಾಜ್ಯದ ಆರ್ಥಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ: ಪ್ರಕಾಶ ತಪಶೆಟ್ಟಿ
ಈ ಕುರಿತು ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷ ಡಾ. ಬಸವರಾಜ್ ಕೆರೂಡಿ, “ಹೃದಯ ಹಾಗೂ ಪ್ರಮುಖ ರಕ್ತನಾಳಗಳಂತಹ ಸೂಕ್ಷ್ಮ ಅಂಗಗಳಿಗೆ ಹಾನಿಯಾಗದಂತೆ ಇಷ್ಟು ದೊಡ್ಡ ಗಡ್ಡೆಯನ್ನು ತೆಗೆದುಹಾಕುವುದು ಅತ್ಯಂತ ನಿಖರತೆಯನ್ನು ಬೇಡುವ ಕೆಲಸ. ನಮ್ಮ ಪರಿಣತ ವೈದ್ಯರ ತಂಡದ ಸಮನ್ವಯ ಮತ್ತು ಅತ್ಯಾಧುನಿಕ ಮೂಲಸೌಕರ್ಯದಿಂದ ಇದು ಸಾಧ್ಯವಾಗಿದೆ” ಎಂದು ತಿಳಿಸಿದರು.
ಬಾಗಲಕೋಟೆ, ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಇಂತಹ ಸಂಕೀರ್ಣ ಎದೆಗೂಡಿನ ಶಸ್ತ್ರಚಿಕಿತ್ಸೆಗಳಿಗಾಗಿ ಮಹಾನಗರಗಳನ್ನು ಅವಲಂಬಿಸುವ ಅನಿವಾರ್ಯತೆಯನ್ನು ತಪ್ಪಿಸಲು ಸ್ಥಳೀಯವಾಗಿಯೇ ಇಂತಹ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿರುವುದು ಈ ಭಾಗದ ಜನರಿಗೆ ದೊಡ್ಡ ಆಸರೆಯಾಗಿದೆ.





