ನಿರ್ಮಾಣ ಹಂತದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್ ಅವರು ಗುತ್ತಿಗೆದಾರರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯ ವಿವಿಧ ಹಂತಗಳನ್ನು ಪರಿಶೀಲಿಸಿ ಮಾತನಾಡಿದರು.
“ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅಗತ್ಯ ಮೂಲಸೌಕರ್ಯಗಳ ನಿರ್ಮಾಣ ಅತ್ಯಂತ ಮಹತ್ವದ್ದಾಗಿದ್ದು, ಕಾಮಗಾರಿಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ವಹಿಸಬೇಕು” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ನಿಗದಿತ ಗುರಿ ಸಾಧನೆಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು: ಮೊಹಮ್ಮದ್ ಮೊಹಸಿನ್
ಈ ವೇಳೆ ಜಿಲ್ಲಾಧಿಕಾರಿ ಸಂಗಪ್ಪ ಅವರು, ಯೋಜನೆಯ ಪ್ರಸ್ತುತ ಹಂತ, ಈವರೆಗೆ ಸಾಧಿಸಿರುವ ಪ್ರಗತಿ ಹಾಗೂ ಬಾಕಿ ಇರುವ ಕಾಮಗಾರಿಗಳ ಕುರಿತು ಯೋಜನಾ ನಕ್ಷೆ ಮೂಲಕ ಉಸ್ತುವಾರಿ ಕಾರ್ಯದರ್ಶಿಗೆ ವಿವರಿಸಿದರು. ಗುತ್ತಿಗೆದಾರರಿಂದ ಕಟ್ಟಡ ನಿರ್ಮಾಣದ ತಾಂತ್ರಿಕ ಮಾಹಿತಿ ಮತ್ತು ಕಾಮಗಾರಿಯ ಪ್ರಗತಿ ಕುರಿತು ವಿವರಗಳನ್ನು ಪಡೆದುಕೊಳ್ಳಲಾಯಿತು.
ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಇದ್ದರು.





