ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರ ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಕೃಷಿ ಪಂಪ್‌ಸೆಟ್‌ಗಳಿಗೆ ಸಮಯಕ್ಕೆ ಸರಿಯಾಗಿ ಹಾಗೂ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಸರ್ಕಾರವನ್ನು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಆಡಳಿತ ಸೌಧಕ್ಕೆ ತೆರಳಿ, ಗ್ರೇಡ್-2 ತಹಶೀಲ್ದಾರ್ ಸಂಗಮೇಶ ಚರಂತಿಮಠ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಬೂಕೆ ಅವರ ಮೂಲಕ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಎನ್‌ಟಿಪಿಸಿ, ಸಕ್ಕರೆ ಕಾರ್ಖಾನೆಗಳು, ವಿಂಡ್ ಪವರ್ ಹಾಗೂ ಸೋಲಾರ್ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಸೂಕ್ತ ವ್ಯವಸ್ಥೆಯ ಮೂಲಕ ಗ್ರಿಡ್‌ಗೆ ಪಡೆದು, ಜಿಲ್ಲೆಯ ಕೃಷಿ ಪಂಪ್‌ಸೆಟ್‌ಗಳಿಗೆ ಆದ್ಯತೆಯ ಮೇರೆಗೆ ಪೂರೈಸಬೇಕು ಎಂದು ಹಿರೇಮಠ ಆಗ್ರಹಿಸಿದರು.
ಆರ್‌ಟಿಪಿಎಸ್, ಬಿಟಿಪಿಎಸ್ ಸೇರಿದಂತೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದನಾ ಸಮಸ್ಯೆ ಎದುರಾದರೆ ಪರ್ಯಾಯ ಮೂಲಗಳಿಂದ ವಿದ್ಯುತ್ ಖರೀದಿಸಿ ಕೃಷಿ ಬಳಕೆಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಲೋಡ್‌ಶೆಡ್ಡಿಂಗ್ ಅಥವಾ ತಾಂತ್ರಿಕ ಕಾರಣಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಸಂದರ್ಭಗಳಲ್ಲಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದರು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ, ಫೀಡರ್‌ಗಳು, ವಿದ್ಯುತ್ ಪರಿವರ್ತಕಗಳು, ಕಂಬಗಳು ಹಾಗೂ ತಂತಿಗಳಲ್ಲಿ ಉಂಟಾಗುವ ದೋಷಗಳನ್ನು ತುರ್ತುಗತಿಯಲ್ಲಿ ದುರಸ್ತಿ ಮಾಡಬೇಕು. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಗೆ ವಿಶೇಷ ಕೃಷಿ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಕೊರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ನೆಪ ಮಾಡಿಕೊಂಡು ಕೃಷಿ ವಿದ್ಯುತ್ ಪೂರೈಕೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.
ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಮಾತನಾಡಿ, “ಈಗಾಗಲೇ ಬಿತ್ತನೆ ಮಾಡಿರುವ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ತಕ್ಷಣ ವಿಶೇಷ ವಿದ್ಯುತ್ ಪೂರೈಕೆ ಮಾಡಬೇಕು. ರೈತರು ಬೆಳೆಗಳಿಗೆ ನೀರು ಹಾಯಿಸಲು ಅನುಕೂಲ ಕಲ್ಪಿಸಬೇಕು. ಮೂರು ದಿನಗಳ ಗಡುವಿನೊಳಗೆ ಕೃಷಿ ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸದಿದ್ದರೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರನ್ನು ಸಂಘಟಿಸಿ ಕಾತರಕಿ ವಿದ್ಯುತ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೋಪಾಲ ಕಮ್ಮನ್ನವರ, ಸಂಗನಗೌಡ ಪಾಟೀಲ, ಅಬ್ದುಲ್ ಹಲವಾಯಿ, ಜಂಗಪ್ಪ ಕಲ್ಲಾರಿ, ಡೋಂಗ್ರಿಸಾಬ ನದಾಪ, ಹಣಮಂತ ದೊರೆಗೊಳ, ಅಜಿತ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





