ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪದೆ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಎಕರೆಗೆ ₹30 ಸಾವಿರದಿಂದ ₹40 ಸಾವಿರ ಖರ್ಚು ಮಾಡಿ ಬೆಳೆದಿರುವ ಬೆಳೆಗಳನ್ನು ಉಳಿಸಲು ಕಾಲುವೆಯ ಕೊನೆಯವರೆಗೂ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬೀಳಗಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ತಾಲೂಕು ಆಡಳಿತ ಸೌಧದ ಮುಂದೆ ಎರಡು ಗಂಟೆಗಳ ಕಾಲ ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪ್ರಭಾರಿ ಜಿ.ಎಲ್.ಬಿ.ಸಿ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಅವರನ್ನು ಸ್ಥಳದಲ್ಲಿಯೇ ಕುಳ್ಳಿರಿಸಿಕೊಂಡು ತಮ್ಮ ಅಹವಾಲು ಸಲ್ಲಿಸಿದರು. ರೈತರ ಬೇಡಿಕೆಗೆ ಸ್ಪಷ್ಟ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ, “ರೈತರು ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗಾಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಬೆಳೆ ಬೆಳೆದಿದ್ದಾರೆ. ಇದೀಗ ಬೆಳೆಗಳು ಫಸಲಿಗೆ ಬಂದಿರುವ ಸಂದರ್ಭದಲ್ಲಿ ಮಳೆಯ ಕೊರತೆ ಹಾಗೂ ಬರದ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಕಾಲ ನೀರಿನ ಅಗತ್ಯವಿದ್ದು, ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
“ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಾತ್ರ ನೀರು ಹರಿಸಲು ಸರ್ಕಾರ ಆದೇಶ ನೀಡಿದ್ದು, ಕೃಷಿ ಉದ್ದೇಶಕ್ಕೆ ನೀರು ಬಳಸಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ರೈತರ ಬೆಳೆಗಳನ್ನು ಉಳಿಸುವ ಮಾನವೀಯ ದೃಷ್ಟಿಯಿಂದ ತಕ್ಷಣ ನೀರು ಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಮೇಲಧಿಕಾರಿಗಳ ಗಮನಕ್ಕೆ ಮನವಿ: ಅಭಿಯಂತರ ಭರವಸೆ
ರೈತರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಕುಳಿತು ಅಹವಾಲು ಆಲಿಸಿದ ಪ್ರಭಾರಿ ಜಿ.ಎಲ್.ಬಿ.ಸಿ. ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಮಾತನಾಡಿ, ಪ್ರಸ್ತುತ ಕಾಲುವೆಯಲ್ಲಿ ಹರಿಸಲಾಗುತ್ತಿರುವ ನೀರು ಜಿ.ಎಲ್.ಬಿ.ಸಿ ನೀರಲ್ಲ. ಕೃಷ್ಣಾ ನದಿಯ ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯಡಿ ಕೃಷಿಯೇತರ ಉದ್ದೇಶಕ್ಕಾಗಿ ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ನಾಗರಾಳದವರೆಗೆ ಸುಮಾರು 38 ಕಿ.ಮೀ. ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಮಾನವೀಯ ದೃಷ್ಟಿಯಿಂದ ಕಾಲುವೆಯ ಕೊನೆಯವರೆಗೂ ನೀರು ಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನವೆಂಬರ್ 1ರಿಂದ ಜಿ.ಎಲ್.ಬಿ.ಸಿ ನೀರನ್ನು 15 ದಿನಗಳ ಕಾಲ ಹರಿಸಲು ಆದೇಶ ಬಂದಿದೆ ಎಂದೂ ತಿಳಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗುರಪ್ಪ ಅನಗವಾಡಿ, ರೈತ ಮುಖಂಡರಾದ ಕರಿಯಪ್ಪ ಬಾಡಗಂಡಿ, ವಿಠ್ಠಲ ಮೇರಾಕರ, ಸಿದ್ದಪ್ಪ ನಾಯ್ಕರ, ಶಾಂತಯ್ಯ ಪಂಚಕಟ್ಟಿಮಠ, ಹೊನ್ನಪ್ಪ ಮಳವಾಡಿ, ಎಂ.ಎಂ. ಹುಗ್ಗಿ, ಎಸ್.ಎಸ್. ಬಾಡಗಂಡಿ, ಬಸವರಾಜ ಮುಳವಾಡ, ಡಿ.ಎಸ್. ಬಾಗವಾನ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.




