ಶರಣ ಸಂಸ್ಕೃತಿಯ ಐತಿಹಾಸಿಕ ಪುಣ್ಯಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮಾಜದ ಮುಖಂಡರು ಪಾಲ್ಗೊಂಡು ಹಿಂದು–ಮುಸ್ಲಿಂ ಭಾವೈಕ್ಯತೆ, ಪರಸ್ಪರ ಗೌರವ ಹಾಗೂ ಸೌಹಾರ್ದತೆಯ ಸಂದೇಶ ಸಾರಿದರು.
ಮುಸ್ಲಿಂ ಸಮಾಜದ ಮುಖಂಡರಾದ ಅಬ್ದುಲ್ ರಜಾಕ್, ಬಹಾವುುದ್ದೀನ್ ಕಾಝಿ, ಮೊಹಮ್ಮದ್ ಗೌಸ್ ಗಡಾದ್, ಮೊಹಮ್ಮದ್ ಸಿರಾಜ್ ಹುಣಚಗಿ, ಲಾಲಸಾಬ್ ಭಂಡಾರಿ, ಮಹಬೂಬ್ ಸಾಬ್ ದೊಟಿಹಾಳ, ಅಬ್ದುಲ್ ವಾಚ್ವಾ, ಮುಜಮ್ಮಿಲ್ ಹಕ್ಕಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಗೋರೋ ಮಹಾಂತೇ ಸ್ವಾಮೀಜಿ, “ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ, ಸಹೋದರತ್ವ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಅಗತ್ಯವಿದೆ. ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸಹಬಾಳ್ವೆ ಸಮಾಜದ ಶಾಂತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ” ಎಂದು ಹೇಳಿದರು.
ಅಲ್ಲಹಾಜ್ ಉಸ್ಮಾನ್ ಗನಿ ಹುನಮಾಬಾದ್ ಮಾತನಾಡಿ, “ಬಸವ ತತ್ವ ಹಾಗೂ ಇಸ್ಲಾಂ ಎರಡೂ ಮಾನವೀಯತೆ, ಸಮಾನತೆ, ಸಹೋದರತ್ವ ಮತ್ತು ಶಾಂತಿ–ಸೌಹಾರ್ದತೆಯನ್ನು ಸಾರುತ್ತವೆ. ಧರ್ಮಗಳ ನಡುವಿನ ಭೇದಭಾವಕ್ಕಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಸವಣ್ಣನವರ ಸಮಾನತೆಯ ತತ್ವಗಳು ಹಾಗೂ ಇಸ್ಲಾಂನ ಮಾನವೀಯ ಸಂದೇಶಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ” ಎಂದು ಅಭಿಪ್ರಾಯಪಟ್ಟರು.
ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿರುವುದು ಇಳಕಲ್–ಚಿತ್ತರಗಿ ಭಾಗದ ಹಿಂದೂ–ಮುಸ್ಲಿಂ ಭಾವೈಕ್ಯತೆ, ಪರಸ್ಪರ ಗೌರವ ಹಾಗೂ ಸೌಹಾರ್ದತೆಗೆ ಉತ್ತಮ ನಿದರ್ಶನವಾಗಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.





