ನಮ್ಮ ಭೌಗೋಳಿಕ ಪ್ರದೇಶದಲ್ಲಿ ಶೇ.35ರಷ್ಟು ಅರಣ್ಯ ಪ್ರದೇಶ ಇರಬೇಕು. ಹಾಗಿದ್ದಾಗ ಮಾತ್ರ ಇಡೀ ವಾತಾವರಣ ಚೆನ್ನಾಗಿರುತ್ತದೆ. ಆದರೆ, ಆಧುನಿಕತೆ ಹೆಸರಿನಲ್ಲಿ ನಿರಂತರವಾಗಿ ಅರಣ್ಯ ನಾಶ ಮುಂದುವರೆದಿದೆ. ಇದು ದೊಡ್ಡ ಸಮಸ್ಯೆ ತಂದೊಡ್ಡುವ ಮುನ್ನೆಚ್ಚರಿಕೆ ಎಂಬುದಾಗಿ ನಾವೆಲ್ಲರೂ ಭಾವಿಸಬೇಕಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ವಿಜಯಕುಮಾರ ಹೊಸೂರ ಹೇಳಿದರು.
ಬಾಗಲಕೋಟೆ ವಿನಾಯಕ ನಗರದಲ್ಲಿ ರೋಟರಿ ಕ್ಲಬ್‌ನಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಒಂದು ಮರ ಕಡಿದರೆ, ಪರ್ಯಾಯವಾಗಿ 10 ಸಸಿ ನೆಡುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮರಗಳ ಮಾರಣಹೋಮ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ಸಂಘ-ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ” ಎಂದರು.
“ಬಾಗಲಕೋಟೆಯ ರೋಟರಿ ಕ್ಲಬ್‌ನಿಂದ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರಿ ಜಾಗ, ಶಾಲೆ, ಕಾಲೇಜುಗಳ ಆವರಣದಲ್ಲಿ ಸಸಿ ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ವಿವಿಧ ಬಗೆಯ 100ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಕೇವಲ ಸಸಿಗಳನ್ನು ನೆಟ್ಟು ಸುಮ್ಮನೆ ಬಿಡುವುದಲ್ಲ. ಅವುಗಳ ಪಾಲನೆಯೂ ಮಾಡಲಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀಳಗಿ | ಜಾತಿ ಗಣತಿ ಜಾರಿ, 2ಬಿ ಮೀಸಲಾತಿ ಮರುಸ್ಥಾಪನೆ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ
ಅರಣ್ಯ ಇಲಾಖೆಯ ಆರ್‌ಎಫ್‌ಒ ಬಸವರಾಜ ಅರಿಶಿಣದ, ರೋಟರಿ ಕ್ಲಬ್‌ನ ಖಜಾಂಜಿ ತುಕಾರಾಮ ಟಿ ಎನ್, ಸದಸ್ಯರಾದ ಚಂದ್ರಶೇಖರ ಕಟಗೇರಿ, ಅಶೋಕ ಶಿರಬೂರ, ಚೆನ್ನಣ್ಣವರ್ ಎಸ್ ಎಲ್, ಬಿ ಕೆ ದೇವಶೆಟ್ಟಿ,ಗಂಗಾಧರ ಬೀಳಗಿ, ಪರಶುರಾಮ ಮುಳಗುಂದ, ಸಂತೋಷ ಕೊಠಾರಿ, ಜಯಪ್ರಕಾಶ ಬನ್ನಿ, ಸತೀಶ ಬೇತಾಳ, ದಿನೇಶ ಬಾರ್ಸಿ, ಸೋಮು ಪರಾಂಡೆ, ಸಂತೋಷ ನಾವಲಗಿ, ಸುರೇಂದ್ರಕುಮಾರ್ ಕೆಎಂ ಹಾಗೂ ಇನ್ನರ್‌ವೀಲ್ ಸದಸ್ಯರು, ವಿನಾಯಕ ನಗರದ ನಿವಾಸಿಗಳು ಇದ್ದರು.
ರೋಟರಿ ಕ್ಲಬ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ 100 ಸಸಿಗಳನ್ನು ವಿನಾಯಕ ನಗರದ ರುದ್ರಾಕ್ಷಿ ಲೇಔಟ್‌ನಲ್ಲಿ ಯಶಸ್ವಿಯಾಗಿ ನೆಡಲಾಯಿತು.





