ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಆಡಳಿತ ಸೌಧದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಹಿರಿಯ ವಕೀಲ ಎಸ್ ಎನ್ ದೇವರವರ ಮಾತನಾಡಿ, “ಲಡಾಖ್‌ನ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಆದಿವಾಸಿ ಹಾಗೂ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅವರು 21 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿರುವುದು ಶ್ಲಾಘನೀಯ” ಎಂದರು.
ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, “ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಬಂಧಿಸಿ ಚಿಕಿತ್ಸೆ ನೀಡುತ್ತಿರುವ ಕ್ರಮ ತೀವ್ರ ಖಂಡನೀಯ. ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ತಾವೂ ಐಕ್ಯತೆ ವ್ಯಕ್ತಪಡಿಸುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿ: ಪಿಎಸ್‌ಐ ವಿದ್ಯಾ
ಪ್ರತಿಭಟನೆಯಲ್ಲಿ ವಕೀಲ ರವಿ ಯಡಹಳ್ಳಿ, ಸಂದೀಪ್ ಬೆಳಗಲಿ, ಶೇಷಕಾಂತ ದೊಡ್ಡಮನಿ, ಸಾಹಿತಿ ಚಿತ್ತರಂಜನ ನಾಂದ್ರೆಕರ್, ಶಿವಾನಂದ ಪಾರಾಶೆಟ್ಟಿ, ಮಹೇಶ ಪಾಟೀಲ, ಮಹೇಶ ಕೋಳಿ, ರಾಜು ನದಾಫ್, ದಯಾನಂದ ಕಾಳೆ, ಶ್ಯಾಮರಾವ್ ಮಾದರ, ರವಿ ಸುತರ, ಮುತ್ತು ಹರಿಜನ, ಸಹಜನಂದ ದೊಡ್ಡಮನಿ, ಅಡಿವೆಪ್ಪ ಮರಿಗುದ್ದಿ, ಅಶೋಕ ಸಿಂಗೆ, ದೀಪಕ್ ಕಂಕಣವಾಡಿ, ಬಸವರಾಜ್ ದೊಡ್ಡಮನಿ ಸೇರಿದಂತೆ ಹಲವರು ಇದ್ದರು.





