ಮುಂಗಾರು ಬಿತ್ತನೆ ವೇಳೆ ರೈತರಿಗೆ ರಸಗೊಬ್ಬರ, ಬಿತ್ತನೆಬೀಜ ವಿತರಣೆಯಲ್ಲಿ ನ್ಯೂನ್ಯತೆ ಕಂಡುಬರುತ್ತಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾ ಘಟಕದ ಕಾರ್ಯಕರ್ತರು ನವನಗರದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
“ರೈತರು ಹೆಸರು, ತೊಗರಿ, ಮೆಕ್ಕೆಜೋಳ ಬಿತ್ತನೆ ಮಾಡುವ ತಯಾರಿಯಲ್ಲಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯವಿಲ್ಲವೆಂದು ತೊಂದರೆ ಕೊಡುತ್ತಿರುವುದು ಸಂಘಟನೆ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು” ಎಂದು ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಒತ್ತಾಯಿಸಿದರು.
“ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತಿದ್ದು, ರೈತರು ಉತ್ತಮವಾದ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಒಂದು ಬಾರಿ ಹವಾಮಾನದ ವೈಪರೀತ್ಯ ಎದುರಾದರೆ ಮತ್ತೊಂದು ಬಾರಿ ಗೊಬ್ಬರ, ಬಿತ್ತನೆ ಬೀಜದ ಅಲಭ್ಯತೆ ರೈತರನ್ನು ಬಾಧಿಸುತ್ತದೆ. ಇಂಥ ಸಮಸ್ಯೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಬೇಕು” ಎಂದರು.
“ಕೆಲ ಖಾಸಗಿ ಕಂಪನಿಗಳು ರೈತರಿಗೆ ಕಡಿಮೆ ಮೊತ್ತದ ಆಸೆ ತೋರಿಸಿ ಕಳಪೆ ಗುಣಮಟ್ಟದ ಬೀಜ ವಿತರಿಸುತ್ತಿವೆ. ಇದು ಅಧಿಕಾರಿಗಳ ಗಮನಕ್ಕಿದ್ದರೂ ಕ್ರಮ ಮಾತ್ರ ಜಾರಿಯಾಗಿಲ್ಲ. ಕಳಪೆ ಗುಣಮಟ್ಟದ ಬೀಜ ಮಾರಾಟ ಕಂಡುಬಂದಲ್ಲಿ ಕರವೇ ಕಾರ್ಯಕರ್ತರು ಮಾಹಿತಿ ನೀಡುತ್ತಾರೆ. ಅದಕ್ಕೆ ತಕ್ಕಂತೆ ಕ್ರಮ ಜರುಗಿಸುವ ಕೆಲಸವಾಗಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಭಾರೀ ಸರ್ಜರಿ, 56 ಪೊಲೀಸ್ ಸಿಬ್ಬಂದಿ ವರ್ಗಾವಣೆ
ಜಿಲ್ಲಾಧ್ಯಕ್ಷ ಗಣಪತಿ ಭೋವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಅಂಬಿಗೇರ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲು ಕಟ್ಟಿಮನಿ, ರಾಮಜಿ ಘೋರ್ಪಡೆ, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಬಡಿಗೇರ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸಲೀಂ ಜರತಾರಿ, ಅಪಣ್ಣ ಬರಡಿಗಿ, ಜಿಲ್ಲಾ ಸಹಕಾರ್ಯದರ್ಶಿ ಶಿವು ಹೊಸಗೌಡರ, ಇಳಕಲ್ ತಾಲೂಕಾಧ್ಯಕ್ಷ ಮಹಾಂತೇಶ ಒಂಕಲಕುಂಟೆ, ಇಳಕಲ್ಲ ನಗರ ಘಟಕದ ಅಧ್ಯಕ್ಷ ಅಶೋಕ ಪೂಜಾರ, ಉಪಾಧ್ಯಕ್ಷ ಹಸನ್ ಕಲಕರಡಿ, ಜಿಲ್ಲಾ ಸಂಚಾಲಕ ಶಿವು ಲೆಂಕಣ್ಣವರ, ನಗರ ಉಪಾಧ್ಯಕ್ಷ ಮಂಜು ಪವಾರ, ಬಾದಾಮಿ ತಾಲೂಕಾ ಘಟಕದ ಅಧ್ಯಕ್ಷ ಮಂಜು ಕಲಾಲ ಸೇರಿದಂತೆ ಇತರರು ಇದ್ದರು.