ಬಲಗೈ ಸಮುದಾಯದ ಸಂಘಟನೆಗೆ, ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ, ಸಮಾಜದ ಮುಖ್ಯವಾಹಿನಿಗೆ ತರಲು ಜುಲೈ 19 ರ ಭಾನುವಾರರಂದು ಚಿಕ್ಕಬಳ್ಳಾಪುರ ಜಿಲ್ಲಾ ಛಲವಾದಿ ಹೊಲೆಯ ಬಲಗೈ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾ ಸಲಹಾ ಸಮಿತಿ ಮುಖಂಡ ಎನ್.ಶಿವಪ್ಪ ತಿಳಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಕಳೆದು 78 ವರ್ಷಗಳು ಕಳೆದರೂ ತಳ ಸಮುದಾಯದ ಬಲಗೈ ಜಾತಿಗಳಿಗೆ ಇಂದಿಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕ್ಗೆ ಬಳಕೆ ಮಾಡಿಕೊಳ್ಳಲಾಗಿದೆ. ಈ ಸಮುದಾಯದವರು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದೇವೆ. ಬಲಗೈ ಜಾತಿಗಳ ಅಸ್ತಿತ್ವ ಗಟ್ಟಿಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸಲು ಇದೀಗ ಸಮುದಾಯಗಳು ಒಗ್ಗಟ್ಟಾಗಿ ಇದ್ದೇವೆ. ಅನೇಕ ಸಂಕಷ್ಟಗಳು, ಸಾಮಾಜಿಕ ಅಸಮಾನತೆಗಳು, ತಾರತಮ್ಯಗಳನ್ನು ಎದುರಿಸಿದರೂ, ನಮ್ಮ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯ, ದುಡಿಮೆ, ಸಂಸ್ಕೃತಿ ಕಳೆದುಕೊಂಡಿಲ್ಲ ಎಂದು ತಿಳಿಸಿದರು.
ಇದರಿಂದ ಬಲಗೈ ಜಾತಿಗಳ ಸಂಘಟನೆ ಮಾಡಲು, ನಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಸಮಾಜದ ಮುಖ್ಯವಾಹಿನಿಗೆ ತರಲು, ಭೂಮಿ, ವಸತಿ, ಆರೋಗ್ಯ, ಶಿಕ್ಷಣ, ಬದುಕು ಕಟ್ಟಿಕೊಳ್ಳಲು ಯುವಕ, ಯುವತಿಯರಲ್ಲಿ ಶಿಕ್ಷಣದ ಮಹತ್ವ ತಿಳಿಸಲಿದ್ದೇವೆ. ನಮ್ಮ ಯುವಕರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾಗಿದೆ ಸಮಾಜದಲ್ಲಿ ಏಕತೆ, ಸಹೋರತ್ವವನ್ನು ಬೆಳಿಸಬೇಕಾಗಿದೆ. ಮೂಡನಂಬಿಕೆ, ಅನಾಚಾರ, ಅಜ್ಞಾನ, ಬಾಲ್ಯವಿವಾಹ ಮತ್ತು ಸಾಮಾಜಿಕ ಪಿಡುಗಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಛಲವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ವಿ.ಕೃಷ್ಣಪ್ಪ ಮಾತನಾಡಿ, ಬಲಗೈ ಸಮುದಾಯಗಳಿಗೆ ಪ್ರತ್ಯೇಕವಾಗಿ ಆರ್ಥಿಕವಾಗಿ ಸದೃಢರಾದಗಲು ವಿಶೇಷ ಸಾಲಸೌಲಭ್ಯ, ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಬೇಕು. ತೀರಾ ಹಿಂದುಳಿದ ಜಾತಿಗಳ ಹೆಣ್ಣುಮಕ್ಕಳಿಗೆ ಬಡ್ಡಿರಹಿತ ಸಾಲ, ಕರಕುಶಲ ತರಬೇತಿಗಳನ್ನು ಕಲಿಸಿ, ವಿಶೇಷ ಸಾಲ ಕಲ್ಪಿಸಬೇಕು. ಪ್ರತಿಯೊಂದು ಮನೆಯಲ್ಲಿ ಒಬ್ಬರಂತೆ ಉನ್ನತ ಶಿಕ್ಷಣ ಪಡೆಯಬೇಕು. ಸಂಘಟಿತ ಸಮಾಜ ಎಂದಿಗೂ ಸದೃಢರಾಗಿ ಇರುತ್ತದೆ. ಇದರಿಂದ ಬಲಗೈ ಜಾತಿಗಳ ಒಕ್ಕೂಟದಿಂದ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಲಗೈ ಜಾತಿಗಳ ಸಮುದಾಯದವರು ಸಮಾವೇಶದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಅವರ 21 ಅಡಿ ಕಂಚಿನ ಪ್ರತಿಮೆ ಕಾಮಗಾರಿ ಪರಿಶೀಲಿಸಿದ ಶಾಸಕ ಕೊತ್ತೂರು ಮಂಜುನಾಥ್
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಗೂಳೂರು ವೇಣು, ರಮೇಶ್, ಬಿ.ರಾಮಚಂದ್ರಪ್ಪ, ವಿ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಸೀನಪ್ಪ, ದೇವರಾಜ್, ನರಸಿಂಹಮೂರ್ತಿ, ಎಚ್.ವೆಂಕಟೇಶಪ್ಪ, ಎಂ.ಎಸ್.ನರಸಿAಹಪ್ಪ, ಸಿ.ಆನಂದ, ಬಿ.ಎನ್.ಆನಂದ, ಕೃಷ್ಣಮೂರ್ತಿ, ಸಿ.ಮಂಜುನಾಥ್, ರಾಮಾಂಜಿ, ಎ.ನರಸಿಂಹಮೂರ್ತಿ ಮತ್ತಿತರರು ಇದ್ದರು.




