ಬಾಗೇಪಲ್ಲಿ: ರಕ್ತದ ಕೊರತೆ ಬಹಳಷ್ಟು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರೂ ರಕ್ತದಾನ ಮಾಡಿ ಕೊರತೆ ನೀಗಿಸಿ ಎಂದು ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆಯ ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ ಹಾಗೂ ಹಿರಿಯ ವಕೀಲರಾದ ಎ.ಜಿ.ಸುಧಾಕರ್ ಹೇಳಿದರು.
ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ರೈತ ಜನಸೇನಾ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಈ ರಕ್ತದಾನ ಶಿಬಿರವು ಮೆಚ್ಚುವಂತಹದ್ದು ಎಂದರು.
ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ರೈತ ಜನಸೇನಾ ಮುಖಂಡ ನರಸಿಂಹ ಮೂರ್ತಿ ಮಾತನಾಡಿ ಪ್ರತಿವರ್ಷ ಲಕ್ಷಾಂತರ ಯುನಿಟ್ ರಕ್ತದ ಕೊರತೆ ಇರುವುದರಿಂದ, ಇಂತಹ ಶಿಬಿರಗಳು ಜೀವ ಉಳಿಸಲು ನೆರವಾಗುತ್ತವೆ. ಆರೋಗ್ಯವಂತ ವ್ಯಕ್ತಿ, ವಿಶೇಷವಾಗಿ ಯುವಜನತೆ ರಕ್ತದಾನ ಮಾಡಬೇಕು. ಇದು ದಾನಿಗಳ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಕರ್ನಾಟಕ ರೈತ ಜನಸೇನಾ ವತಿಯಿಂದ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಾಗುತ್ತದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಅಂಬೇಡ್ಕರ್ ಜಯಂತಿಗೆ ಪ್ರತಿ ಗ್ರಾಮದಿಂದ ಪಲ್ಲಕ್ಕಿಗಳಿಗೊಂದಿಗೆ ಭಾಗವಹಿಸಲು ಮನವಿ
ಈ ಸಂದರ್ಭದಲ್ಲಿ ಕರ್ನಾಟಕ ರೈತ ಜನಸೇನಾ ಮುಖಂಡರಾದ ಮಂಜುನಾಥ, ಅಜಯ್ ಕುಮಾರ್, ನರೇಂದ್ರ, ಅರುಣ್,ರಾಮು ,ಅಲ್ತಾಫ್,ಶ್ರೀನಾಥ್ ಹಾಗೂ ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.




