ಬಿತ್ತನೆ ವೇಳೆಗೆ ಸಮರ್ಪಕವಾಗಿ ಬಾರದ ಮಳೆಯಿಂದಾಗಿ ಬೇಸತ್ತಿರುವ ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರವೂ ಸಿಗುತ್ತಿಲ್ಲ. ಸಕಾಲಕ್ಕೆ ರಸಗೊಬ್ಬರ ಸರಬರಾಜು ಮಾಡದ ಸರಕಾರ ರೈತರನ್ನು ಕಡೆಗಣಿಸಿವೆ ಎಂದು ಆರೋಪಿಸಿ ಕೆಪಿಆರ್‌ಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಪಟ್ಟಣದ ಟಿಎಪಿಸಿಎಂಸಿ ರಸಗೊಬ್ಬರಗಳ ಮಾರಾಟ ಕೇಂದ್ರದ ಹಾಗೂ ತಾಲೂಕಿನ ಗೂಳೂರಿನಲ್ಲಿ ಸೊಸೈಟಿಯ ಮುಂದೆ ಮುಂಜಾನೆ ಸುಮಾರು 4.30 ಗಂಟೆಯಿಂದಲೇ ರಸಗೊಬ್ಬರಕ್ಕಾಗಿ ನೂರಾರು ರೈತರು ಸಾಲುಗಟ್ಟಿ ಪರದಾಡಿದರು. ಆದರೂ ಹಲವಾರು ರೈತರು ರಸಗೊಬ್ಬರ ದೊರೆಯದೆ ವಾಪಸ್ಸು ಹೋದರು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, “ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳಿಗಾಗಲಿ,ಶಾಸಕರಿಗೆ ಕಿಂಚಿತ್ತು ರೈತಪರ ಕಾಳಜಿ ಇಲ್ಲ. ರೈತರ ನೋವು ನಲಿವುಗಳ ಬೇಕಾಗಿಲ್ಲ. ಹಾಗಾಗಿ ಸಮರ್ಪಕ ರಸಗೊಬ್ಬರ ಪೂರೈಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದರು.

“ರೈತರು ಬೆಳಗ್ಗೆಯಿಂದಲೇ ರಸಗೊಬ್ಬರಕ್ಕಾಗಿ ಅಂಗಡಿ ಮುಂದೆ ನಿಂತರೂ ಸಮರ್ಪಕವಾಗಿ ಗೊಬ್ಬರ ಸಿಗುತ್ತಿಲ್ಲ. ಕೆಲವರು ರಸಗೊಬ್ಬರಗಳನ್ನು ಸ್ಟಾಕ್ ಇಟ್ಟು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುತ್ತಿದ್ದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಲಂಚಗುಳಿತನ, ದುರಾಡಳಿತ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ. ಸಮರ್ಪಕವಾಗಿ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗೊಬ್ಬರ ದಾಸ್ತಾನು ಮಾಡದೆ ನಿರ್ಲಕ್ಷ್ಯವಹಿಸಿದೆ” ಎಂದು ಅಸಮಾಧಾನಗೊಂಡರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸರ್ಕಾರಿ ನೌಕರರು ತಮ್ಮ ಹುದ್ದೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು: ಷಡಕ್ಷರಿ
“ನಾವು ರೈತ ಪರ ಎನ್ನುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹಾಗೂ ಕೇಂದ್ರ ಬಿಜೆಪಿಯವರು ರಾಜಕೀಯ ಲಾಭ ಗಳಿಸಲು ಮಾತ್ರ ರೈತರ ಮಾತು ಬರುತ್ತದೆ. ಉಳಿದಂತೆ ರೈತನ ಸಂಕಷ್ಟಗಳಿಗೆ ಕೊನೆ ಇಲ್ಲದಂತಾಗಿದೆ. ಹಾಗಾಗಿ ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವೆ ಅಧಿಕಾರ ಬಿಟ್ಟು ತೊಲಗಲಿ” ಎಂದು ಆಕ್ರೋಶ ವ್ಯಕ್ತ ಪಡಿಸಿದರು.