ಬಾಗೇಪಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲು ಹೆಣ್ಣು ಮಕ್ಕಳು, ಮಹಿಳೆಯರು ಹಾಗೂ ಯುವ ಸಮುದಾಯ ಮುಂದಾಗಿದ್ದು, ಗೌರಿ ಹಬ್ಬ ಇರುವುದರಿಂದ ಗೌರಿಯ ಪೂಜೆ ನಡೆಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಗಣೇಶ ಹಬ್ಬ ಇರುವುದರಿಂದ ಪುರಸಭೆ ವ್ಯಾಪ್ತಿ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲು ಯುವಕರ ಸಂಘಗಳು, ಸಂಘ-ಸಂಸ್ಥೆಯವರು ನಿಗದಿತ ಸ್ಥಳಗಳಲ್ಲಿ ಚಪ್ಪರ ಹಾಕುವುದು, ಗಣಪತಿ ಮೂರ್ತಿ ಖರೀದಿ ಹಾಗೂ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಹೂವು, ಹಣ್ಣು, ಕಾಯಿ ಹಾಗೂ ಇನ್ನಿತರ ಪದಾರ್ಥಗಳ ಬೆಲೆ ಹಬ್ಬದ ಪ್ರಯುಕ್ತ ಹೆಚ್ಚಾಗಿದ್ದರೂ ಜನರು ಲೆಕ್ಕಿಸದೆ ಹಬ್ಬವನ್ನು ಸಡಗರದಿಂದ ಆಚರಿಸಲು ಕುಟುಂಬ ಸಮೇತರಾಗಿ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಪ್ರತಿಯೊಂದು ಸಮುದಾಯದ ರಸ್ತೆಗಳಲ್ಲೂ ಗಣೇಶ ಮೂರ್ತಿ ಕೂರಿಸಲು ಪೈಪೋಟಿ ಏರ್ಪಟ್ಟಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಎತ್ತರವಾದ ಗಣಪತಿ ಮೂರ್ತಿಯನ್ನು ಕೂರಿಸಬೇಕೆಂದು ವಿವಿಧೆಡೆಯಿಂದ ಮೂರ್ತಿಯನ್ನು ಖರೀದಿಸಿ ತರಲು ಮುಂದಾಗಿರುವುದು ಕಂಡುಬಂದಿದೆ.

”ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಜನಸಾಮಾನ್ಯರು ಕೂರಿಸಿ ಪೂಜೆ ಸಲ್ಲಿಸಬೇಕು. ಈ ಮೂಲಕ ಸರ್ಕಾರದ ಮತ್ತು ಪುರಸಭೆಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸ ಬೇಕು. ಸ್ವಚ್ಛತೆ ಕಾಪಾಡಬೇಕು. ಗಣಪತಿ ಮೂರ್ತಿ ಕೂರಿಸುವ ಸಂಘ ಸಂಸ್ಥೆಯವರು ಪೋಲೀಸರು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣಪತಿ ಮೂರ್ತಿಗಳ ವಿಸರ್ಜನೆಗಾಗಿ ಪಟ್ಟಣದ ರಾಮಸ್ವಾಮಿಪಲ್ಲಿ ರೆಡ್ಡಿ ಕೆರೆಯಲ್ಲಿ ನೀರಿನ ಕೊಳವನ್ನು ಪುರಸಭೆ ವತಿಯಿಂದ ಸಜ್ಜುಗೊಳಿಸಲಾಗಿದೆ” ಎಂದು ಪುರಸಭೆ ಮುಖ್ಯಾಧಿಕಾರಿಗಳಾದ ಶ್ರೀನಿವಾಸ್ ತಿಳಿಸಿದರು.
ಇದನ್ನು ಓದಿದ್ದೀರಾ? ಗಣೇಶ ಮೂರ್ತಿಗಳ ವಿಸರ್ಜನೆ | 41 ಕಲ್ಯಾಣಿ, 489 ಮೊಬೈಲ್ ಟ್ಯಾಂಕ್ ವ್ಯವಸ್ಥೆ ಕಲ್ಪಿಸಿದ ಬಿಬಿಎಂಪಿ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗಣಪತಿ ಮೂರ್ತಿಯನ್ನು ಕೂರಿಸುವವರು ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯಲೇಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಡಿಜೆ, ಇನ್ನಿತರ ಅತಿ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸಬಾರದು. ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಈಗಾಗಲೇ ವಿವಿಧ ಸಮುದಾಯಗಳ ಮುಖಂಡರನ್ನು ಕರೆದು ಸಭೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
