ಬಾಗೇಪಲ್ಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 44ರ ಗಂಗೋತ್ರಿ ಪೆಟ್ರೋಲ್ ಬಂಕ್ ಬಳಿ ಭಾನುವಾರ ಸರಣಿ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಥಾರ್ ಕಾರು, ಆಟೋ ಹಾಗೂ ಕ್ಯಾಂಟರ್ ವಾಹನಗಳ ನಡುವೆ ನಡೆದ ಈ ಭೀಕರ ರಸ್ತೆ ದುರಂತದಲ್ಲಿ ಆಟೋದಲ್ಲಿದ್ದ ಕೂಲಿಗಾಗಿ ಹೋಗಿದ್ದ ನಾಲ್ವರು ಮಹಿಳೆಯರು ಮತ್ತು ಆಟೋ ಚಾಲಕ ಸೇರಿ ಒಟ್ಟು ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಬ್ಬ ಮಹಿಳೆ ಮೃತ ಪಟ್ಟಿರುವ ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ರಸ್ತೆಯಲ್ಲಿ ಅತಿ ವೇಗವಾಗಿ ಬಂದ ಥಾರ್ ಕಾರು ತನ್ನ ಮುಂದೆ ಚಲಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಮತ್ತು ತೀವ್ರತೆ ಎಷ್ಟಿತ್ತೆಂದರೆ, ಆಟೋ ಸಂಪೂರ್ಣವಾಗಿ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕ್ಯಾಂಟರ್ ವಾಹನಕ್ಕೆ ಅಪ್ಪಳಿಸಿದೆ. ಎರಡು ದೊಡ್ಡ ವಾಹನಗಳ ಮಧ್ಯೆ ಸಿಲುಕಿದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಪ್ರಯಾಣಿಸುತ್ತಿದ್ದ ಐವರು ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರನ್ನು ಬಾಗೇಪಲ್ಲಿ ಪಟ್ಟಣದ 5 ನೇ ವಾರ್ಡ ಹಾಗೂ ಕೊತ್ತಪಲ್ಲಿ ನಿವಾಸಿಗಳಾದ ಉಮಾದೇವಿ (55 ವರ್ಷ), ವಿಜಯಾ (40 ವರ್ಷ), ಲಕ್ಷ್ಮಮ್ಮ (50 ವರ್ಷ), ಸರೋಜಮ್ಮ (65 ವರ್ಷ) ಆಟೋ ಚಾಲಕ ಆಂಜಿನಪ್ಪ (35 ವರ್ಷ) ಹಾಗೂ ಅರುಣಮ್ಮ(45 ವರ್ಷ)
ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ…? ಕೆಜಿಎಫ್ | ನಕಲಿ ಬಿತ್ತನೆ ಬೀಜ: ರೈತರಿಗೆ ಲಕ್ಷಾಂತರ ರೂ ನಷ್ಟ..! – ಈ ದಿನ.ಕಾಮ್
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸರಣಿ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಲ್ ಚೌಕ್ಸೆ,ಕೇಂದ್ರ ಪೋಲಿಸ್ ಮಹಾ ನಿರೀಕ್ಷಕ ಎಸ್.ಗಿರೀಶ್, ಹಾಗೂ ಬಾಗೇಪಲ್ಲಿ ವೃತ್ತ ನಿರೀಕ್ಷಕ ಅಜಯ್ ಸಾರಥಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ದುರಂತದ ಮೃತರಾದವರು ಎಲ್ಲರೂ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




