ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಬಡವರು, ದಲಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಜಾತ್ಯತಿವಾಗಿ ಎಲ್ಲ ಸಮುದಾಯಗಳ ಶೋಷಿತರ ಪರವಾಗಿ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸುವುದೇ ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಬಾಗೇಪಲ್ಲಿ ಮಹಾನಾಯಕ ಬಿ ಆರ್ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ ವಿ ನಾರಾಯಣಸ್ವಾಮಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಸೇನೆ ಕಳೆದ 5 ವರ್ಷಗಳಿಂದ ಬಡವರು, ದಲಿತರು, ಕಾರ್ಮಿಕರು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ನಮ್ಮ ಸಂಘಟನೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದಲ್ಲದೆ ಅಂಬೇಡ್ಕರ್ ಅವರ ಆಶಯದಂತೆ ಜಾತ್ಯತೀತವಾಗಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ಸಂಘಟಿಸಲಾಗುವುದು” ಎಂದು ತಿಳಿಸಿದರು.
“ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಸಂಘಟನೆ ಮಾಡಲಾಗಿದೆ. ಅತಿ ಶೀಘ್ರದಲ್ಲಿಯೇ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಸಂಘಟಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರಲ್ಲದೆ ತಾಲೂಕು ಮಟ್ಟದಲ್ಲಿ ಶಾಖೆಗಳನ್ನು ಪ್ರಾರಂಭಿಸಿ ಗ್ರಾಮೀಣ ಪ್ರದೇಶಗಳಿಂದ ತಳಮಟ್ಟದಿಂದ ಸಂಘಟನೆಯನ್ನು ಸಂಘಟಿಸಲು ನೂತನ ಪದಾಧಿಕಾರಿಗಳು ಕೈಜೋಡಿಸಬೇಕು” ಎಂದು ಹೇಳಿದರು.
“ಮಹಾನಾಯಕ ಬಿ ಆರ್ ಅಂಬೇಡ್ಕರ್ ಸೇನೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ನೂತನ ಪದಾಧಿಕಾರಿಗಳನ್ನು ಬಾಗೇಪಲ್ಲಿಯ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಪ್ಲಾಸ್ಟಿಕ್ ಆಯುವವನಿಂದ ಚುನಾವಣಾ ಹೋರಾಟ; ಜನತೆಗೆ ಪ್ರಜಾಪ್ರಭುತ್ವದ ಪಾಠ
ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷರನ್ನಾಗಿ ಎನ್ ನಾರಯಣಸ್ವಾಮಿ, ಉಪಾಧ್ಯಕ್ಷರಾಗಿ ಯಲ್ಲಂಪಲ್ಲಿ ಶ್ರೀನಿವಾಸಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಬಂಡಿ ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಮಣಿ ಕುಮಾರ್, ರಾಮಕೃಷ್ಣ, ಗಂಗರಾಜು, ಎಂ ಆರ್ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ರಾಮಕೃಷ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಪಾತಪಾಳ್ಯ ಗಂಗರಾಜು, ಕಾಯಾಧ್ಯಕ್ಷ ಪೆನಮಲ ನರಸಿಂಹಪ್ಪ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಜಿ ಗಂಗುಲಮ್ಮ, ಪ್ರಧಾನ ಕಾರ್ಯದರ್ಶಿ ಪಿ ಎನ್ ವನಜಾ, ಉಪಾಧ್ಯಕ್ಷೆ ಭೂದೇವಿ, ರಮಾದೇವಿ, ಕಾರ್ಯದರ್ಶಿ ರಾಧಮ್ಮ, ಸಹಕಾರ್ಯದರ್ಶಿ ಸುನಂದ, ಖಜಾಂಚಿ ಅಶ್ವಿನಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪ, ಉಪಾಧ್ಯಕ್ಷ ಮಿಲ್ಟ್ರಿ ನಾಗರತ್ನಮ್ಮ, ಕಾರ್ಯಾಧ್ಯಕ್ಷ ಜ್ಯೋತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಾಯಕ ಬಿ ಆರ್ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಎಂ ಸಿ ತಿಮ್ಮರಾಜು, ಪ್ರಧಾನ ಕಾರ್ಯದರ್ಶಿ ಎಸ್ ಬಿ ಮಂಜುನಾಥ್ ಸೇರಿದಂತೆ ಸಂಘಟನೆಯ ಮುಖಂಡರು ಇದ್ದರು.