ರಾಜ್ಯ ಸರ್ಕಾರವು ಸೆ.22ರಿಂದ ಅ.7ರವರೆಗೆ 15 ದಿನಗಳ ಕಾಲ ಹೊಸ ಸಾಮಾಜಿಕ-ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದ್ದು, ಸಮುದಾಯದವರು ಕಡ್ಡಾಯವಾಗಿ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ.
ಪಟ್ಟಣದ ಹೊರವಲಯದ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜನಾಂಗದ ಜಾತಿಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, “1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಯು ಈಗ ನಡೆಯುತ್ತಿರುವುದು ಸ್ವಾಗತಾರ್ಹ. ಒಕ್ಕಲಿಗರ ಜನಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಯಾವುದೇ ಗಣತಿದಾರರು ಬಂದಾಗ, ಉಪ ಪಂಗಡಕ್ಕೆ ಸೇರಿದ್ದರೂ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕು. ಉಪ ಪಂಗಡಗಳನ್ನು ಉಪ ಜಾತಿ ಕಾಲಂನಲ್ಲಿ ದಾಖಲಿಸಬೇಕು. ಜಾತಿ ಕಾಲಂನಲ್ಲಿ ಯಾರೂ ಉಪ ಜಾತಿ ನಮೂದಿಸಬಾರದು. ಹಾಗೇಯೇ ಸರಿಯಾದ ವಿದ್ಯಾಭ್ಯಾಸ, ಜಮೀನು, ಆರ್ಥಿಕ ಸ್ಥಿತಿಗಳ ಮಾಹಿತಿ ನೀಡಬೇಕು” ಎಂದು ತಿಳಿಸಿದ್ದಾರೆ.
“ಒಕ್ಕಲಿಗರು ಹಿಂದೆ ಆಶ್ರಯ ಹಾಗೂ ಅನ್ನದಾತರಾಗಿದ್ದರು. ಆಗ ಎಲ್ಲರೂ ಒಗ್ಗಟ್ಟಾಗಿದ್ದು ಸಮಾಜದ ಏಳಿಗೆಗೆ ದುಡಿಯುತ್ತಿದ್ದರು. ಆದರೆ ಈಗ ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ನಾವು ಮತ್ತು ನಮ್ಮ ಸಮಾಜ ಉಳಿಯ ಬೇಕಾದರೆ ಒಕ್ಕಲಿಗರು ಒಗ್ಗಟಾಗಿರಬೇಕು. ಸಮುದಾಯಕ್ಕೆ ದಕ್ಕಬೇಕಾದ ಮೀಸಲಾತಿ ಸಿಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಈಗ ಆ ಕಾಲ ಕೂಡಿ ಬಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಗೇಪಲ್ಲಿ | ಮಹಾನಾಯಕ ಬಿ ಆರ್ ಅಂಬೇಡ್ಕರ್ ಸೇನೆ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಹೋರಾಟಗಾರ ನಾಗರಾಜು, ತಾಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ನರಸಿಂಹಾ ರೆಡ್ಡಿ, ವೈ ಶ್ರೀನಿವಾಸ್ ರೆಡ್ಡಿ, ಹರಿನಾಥ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಚಿನ್ನಸಂದ್ರ ಮುರಳಿ, ಬಿಎಸ್ಎನ್ಎಲ್ ವೆಂಕಟೇಶ್, ನಾಗರಾಜರೆಡ್ಡಿ, ಒಕ್ಕಲಿಗ ಜನಾಂಗದ ಮುಖಂಡರು ಹಾಗೂ ಒಕ್ಕಲಿಗ ಸಮದಾಯದ ಸಾರ್ವಜನಿಕರು ಹಾಜರಿದ್ದರು.