ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ಟಿನ್ ಫ್ಯಾಕ್ಟರಿವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ತೀವ್ರ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ ಎಸ್ ರಮೇಶ್ ಅವರು ತಿಳಿಸಿದ್ದಾರೆ.
ಸೈಡ್ ಡ್ರೈನ್ ಸ್ವಚ್ಛಗೊಳಿಸಿ, ಸ್ಲ್ಯಾಬ್‌ಗಳನ್ನು ಸರಿಪಡಿಸಿ
ಆಯುಕ್ತರು ಇಂದು ಮುಂಜಾನೆ ನಗರ ಪಾಲಿಕೆಯ ಇಬ್ಬಲೂರು ಜಂಕ್ಷನ್ ನಿಂದ ಟಿನ್ ಫ್ಯಾಕ್ಟರಿವರೆಗಿನ ರಸ್ತೆ, ಸೈಡ್ ಡ್ರೈನ್, ಪಾದಚಾರಿ ಮಾರ್ಗವನ್ನು ಪರಿಶೀಲಿಸಿದರು. ಚರಂಡಿಗಳನ್ನು ಸ್ಚಚ್ಛತೆ ಮಾಡಿ ಸರಿಯಾಗಿ ನೀರು ಹರಿದು ಹೋಗುವಂತೆ ಮಾಡಿ ಹಾಗೂ ಮುರಿದಿರುವ ಚರಂಡಿ ಸ್ಲ್ಯಾಬ್‌ಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಎಚ್ಚರಿಕೆ ನೀಡಿದರು. ಅಧಿಕಾರಿಗಳು ತಮಗೆ ನೀಡಿರುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಯುಕ್ತರು ಎಚ್ಚರಿಕೆ ನೀಡಿದರು.
ಅನಧಿಕೃತ ಒತ್ತುವರಿದಾರರಿಗೆ ನೋಟಿಸ್ ನೀಡಿ
ಇಬ್ಬಲೂರು ಜಂಕ್ಷನ್‌ನಿಂದ ಟಿನ್ ಫ್ಯಾಕ್ಟರಿವರೆಗಿನ ಪಾದಚಾರಿ ಮಾರ್ಗದುದ್ದಕ್ಕೂ ಅನಧಿಕೃತವಾಗಿ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡು ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿಕೊಂಡಿರುವವರಿಗೆ ಈ ಕೂಡಲೇ ನೋಟಿಸ್ ನೀಡಿ, ದಂಡ ವಿಧಿಸಲು ಹಾಗೂ ಆದಷ್ಟು ಶೀಘ್ರದಲ್ಲಿ ಒತ್ತುವರಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಖಾಲಿ ನಿವೇಶನದಾರಿಗೆ ನೋಟಿಸ್ ನೀಡಿ
ಆಯುಕ್ತರ ಪರಿಶೀಲನೆ ವೇಳೆ ಖಾಲಿ ನಿವೇಶನಗಳಲ್ಲಿ ಸ್ವಚ್ಚತೆ ಇಲ್ಲದಿರುವುದು ಕಂಡುಬಂದಿದ್ದು, “ಖಾಲಿ ನಿವೇಶನಗಳ ಸ್ವತ್ತಿನ ಮಾಲೀಕರಿಗೆ ಕೂಡಲೇ ನೋಟಿಸ್‌ಗಳನ್ನು ನೀಡಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು. ನಿರ್ದಿಷ್ಟ ಸಮಯದಲ್ಲಿ ಸ್ವತ್ತಿನ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛವಾಗಿ ಇಡದಿದ್ದರೆ ನಗರ ಪಾಲಿಕೆಯಿಂದ ಸ್ವಚ್ಛಮಾಡಿ ಮಾಲೀಕರಿಂದ ದಂಡ ವಸೂಲಿ ಮಾಡಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಾಸ್ಪಿಟಲ್‌ಗೆ ನೋಟಿಸ್ ನೀಡಿ
ಖಾಸಗಿ ಹಾಸ್ಪಿಟಲ್ ಎತ್ತರದಲ್ಲಿದ್ದು, ಹಾಸ್ಪಿಟಲ್‌ನಿಂದ ಬರುವ ನೀರು ಸೈಡ್ ಡ್ರೈನ್‌ಗೆ ಹೋಗದೆ ನೇರವಾಗಿ ತೆರೆದ ಡ್ರೈನ್ ಮೂಲಕ ರಸ್ತೆಗೆ ಬರುತ್ತಿದೆ. ಇದರಿಂದ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿರುತ್ತದೆ. ಹಾಸ್ಪಿಟಲ್ ಇಂಗು ಗುಂಡಿ ನಿರ್ಮಿಸಿಕೊಂಡು ನೀರನ್ನು ಮರುಬಳಕೆ ಮಾಡಿಕೊಳ್ಳಲು ಸೂಚಿಸಿದ್ದು, ಖಾಸಗಿ ಹಾಸ್ಪಿಟಲ್‌ಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಬಿ.ಎಂ.ಆರ್. ಸಿ.ಎಲ್ ನೊಂದಿಗೆ ಸಮ್ವನಯ
ಮೆಟ್ರೋ ಪಿಲ್ಲರ್ ಮತ್ತು ರೈಲ್ವೆ ಲೈನ್ ಉದ್ದಕ್ಕೂ ಸಂಗ್ರಹವಾಗಿರುವ ಡೆಬ್ರಿಸ್ ಮತ್ತು ಕಸವನ್ನು ತೆರವುಗೊಳಿಸುವ ಸಂಬಂಧ ಮೆಟ್ರೋ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಡೆಬ್ರಿಸ್ ಮತ್ತು ಕಸವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪಾಲಿಕೆಯ ಸ್ವಚ್ಛತಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಸಾಹಸ ತಂಡದ ಸಹಯೋಗದೊಂದಿಗೆ ಕಸ ಸುರಿಯುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸೌಂದರ್ಯೀಕರಣ ಮಾಡುವ ಕಾರ್ಯದಲ್ಲಿ ಆಯುಕ್ತರು ಭಾಗಿಯಾದರು.
ವಾರ್ಡಗಳಲ್ಲಿ ತಳಮಟ್ಟದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು? ಆದ್ಯತೆ ಮೇಲೆ ಯಾವುದನ್ನು ಪರಿಗಣಿಸಬೇಕು? ಎಂಬಂತಹ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ತಿಳಿದುಕೊಂಡು ಮೈಕ್ರೋ ಪ್ಲಾನ್ ತಯಾರಿಸಿ ಅದರಂತೆ ಕಾರ್ಯ ನಿರ್ವಹಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ʼಅಡ್ಡಗೋಡೆ ಮೇಲೆ ದೀಪ ಇಟ್ಟರೆ ಏನೂ ಪ್ರಯೋಜನವಿಲ್ಲ’: ಕೃಷಿ ಇಲಾಖೆಗೆ ಕೃಷ್ಣ ಬೈರೇಗೌಡರ ಖಡಕ್ ಕ್ಲಾಸ್
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಮಾರುಕಟ್ಟೆ ಸ್ಥಳಗಳನ್ನಾಗಿ ಬಳಸಲಾಗುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ ರಾತ್ರಿಯಲ್ಲಿ ಆ ಸ್ಥಳಗಳನ್ನು ತೀವ್ರ ಸ್ಚಚ್ಛತಾ ಕಾರ್ಯವನ್ನು ಕೈಗೊಳ್ಳಲು ಆಕ್ಷನ್ ಪ್ಲಾನ್ ಸಿದ್ಧಪಡಿಸಿಕೊಂಡು ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅಪರ ಆಯುಕ್ತರು (ಅಭಿವೃದ್ಧಿ) ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನಡೆದ ಪರಿಶೀಲನೆಯಲ್ಲಿ ಆಯುಕ್ತರೊಂದಿಗೆ ಅಪರ ಆಯುಕ್ತರು ಲೋಖಂಡೆ ಸ್ನೇಹಲ್ ಸುಧಾಕರ್, ಉಪ ಪ್ರಧಾನ ವ್ಯವಸ್ಥಾಪಕರು, ಕಾರ್ಯ ಪಾಲಕ ಅಭಿಯಂತರರು(ಮಹದೇವಪುರ ವಿಭಾಗ), ಜಲಮಂಡಳಿ ಎಜಿಎಂ ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು.