ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಶ್ರೀಮಂತ ಗ್ರಾಮ ಪಂಚಾಯತಿಗಳಲ್ಲಿ ಒಂದೆನಿಸಿಕೊಂಡಿರುವ ಚೊಕ್ಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಹಾಗೂ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲೊಂದಾದ ಪಿಲ್ಲಗುಂಪೆಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ಸ್ಥಳೀಯರು ಹೈರಾಣಾಗಿದ್ದಾರೆ.
ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಅದಕ್ಕೆ ಹೊಂದಿಕೊಂಡಿರುವ ಪಿಲ್ಲಗುಂಪೆ ಗ್ರಾಮಗಳಲ್ಲಿ ಸಾವಿರಾರು ಮಂದಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಚೊಕ್ಕಹಳ್ಳಿ ಮತ್ತು ಪಿಲ್ಲಗುಂಪೆ ಗ್ರಾಮಗಳು ನಿತ್ಯವೂ ಜನನಿಬಿಡ ಪ್ರದೇಶವಾಗಿ ಮಾರ್ಪಡುತ್ತಿವೆ. ಸರಿಯಾಗಿ ಕಸ ಸಂಗ್ರಹವಾಗದ ಕಾರಣ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದ್ದು, ಎಲ್ಲೆಡೆ ತ್ಯಾಜ್ಯದ ರಾಶಿಗಳು ಕಣ್ಣಿಗೆ ರಾಚುತ್ತವೆ. ಈ ರಾಶಿಯೂ ಸರಿಯಾದ ಸಮಯಕ್ಕೆ ವಿಲೇವಾರಿಯಾಗದೆ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಚರಂಡಿಗಳಲ್ಲಿ ಮಡುಗಟ್ಟಿದ ಕೊಳಚೆ ನೀರು, ಹದಗೆಟ್ಟ ರಸ್ತೆ ಇವೆಲ್ಲವೂ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೇ ಕಾಣುವ ಸಮಸ್ಯೆಗಳಾಗಿವೆ.
ಗ್ರಾಮಕ್ಕೆ ನೀರು ಸರಬರಾಜು ಮಾಡಲು ಒಳಚರಂಡಿಯಲ್ಲಿ ಪೈಪ್‌ಗಳನ್ನು ಅಳವಡಿಸಿದ್ದಾರೆ. ಪೈಪ್ ಒಡೆದು ಕೊಳಚೆ ನೀರು ಕುಡಿಯುವ ನೀರಿಗೆ ಸೇರಿದರೆ ಗತಿ ಏನೆಂದು ಸಾರ್ವಜನಿಕರು ಕಳವಳಪಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ; ಲೋಕ ಅದಾಲತ್‌ನಲ್ಲಿ ಒಂದಾದ ಆರು ಜೋಡಿ
“ಗ್ರಾಮದಲ್ಲಿ ನಡೆಸುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ. ಮುಂದಾಲೋಚನೆ ಇಲ್ಲದೆ ಎಲ್ಲೆಂದರಲ್ಲಿ ನಲ್ಲಿಯ ಪಾಯಿಂಟ್ ಅಳವಡಿಸಿದ್ದು, ಗುಣಮಟ್ಟ ಕಾಯ್ದುಕೊಂಡಿಲ್ಲ” ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.