ಬನ್ನೇರುಘಟ್ಟ ಜೈವಿಕ ಉದ್ಯಾನವು ನೀರಿನ ಬವಣೆಯನ್ನು ನಿವಾರಿಸಿಕೊಳ್ಳಲು ಪಾರಂಪರಿಕ ಜೈವಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಬೇಸಿಗೆ ಬಿರು ಬಿಸಿಲಿನಿಂದಾಗಿ ಎಲ್ಲೆಡೆ ಕೆರೆಗಳು ಬತ್ತಿ ಹೋಗಿದ್ದರೂ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಗಳಲ್ಲಿ ನೀರಿರುವುದರಿಂದ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ನೀಗಿದೆ.
ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಸುಮಾರು 731 ಹೆಕ್ಟೇರ್ ಪ್ರದೇಶ ಹೊಂದಿದೆ. ಇಲ್ಲಿ ಸಸ್ಯಹಾರಿ ಪ್ರಾಣಿಗಳ ಸಫಾರಿ, ಹುಲಿ-ಸಿಂಹ ಸಫಾರಿ, ಮೃಗಾಲಯ, ಕರಡಿ ಸಫಾರಿ ಸೇರಿದಂತೆ ವಿವಿಧ ಸಫಾರಿ ಮತ್ತು ಮೃಗಾಲಯದಲ್ಲಿ ಸುಮಾರು 3,000ಕ್ಕೂ ಹೆಚ್ಚು ಪ್ರಾಣಿಗಳಿದ್ದು, ಆನೆಗಳು ಪರಸ್ಪರ ನೀರು ಎರಚಿಕೊಂಡು ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳುತ್ತಿದ್ದು, ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ನೀರಿನಲ್ಲಿಯೇ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಿವೆ.
ಸಸ್ಯಹಾರಿ ಸಫಾರಿಯಲ್ಲಿಯೇ 2000ಕ್ಕೂ ಹೆಚ್ಚು ಪ್ರಾಣಿಗಳಿವೆ. ಈ ಎಲ್ಲ ಪ್ರಾಣಿಗಳಿಗೂ ನೀರು ಒದಗಿಸುವುದು ಹರಸಾಹಸವಾಗಿದೆ. ಆದರೆ ಜೈವಿಕ ಉದ್ಯಾನದಲ್ಲಿರುವ ಹಲವು ಕೆರೆಗಳು ಈ ಪ್ರಾಣಿಗಳಿಗೆ ನೀರಿನ ಆಸರೆಯಾಗಿವೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಾವಲು ಕೆರೆ, ಸೀಗೇಕಟ್ಟೆ ಕೆರೆ, ಗದ್ದೆಹಳ್ಳನ ಕೆರೆ, ಪುಟ್ಟನ ಕುಂಟೆ, ಮೋಟಣ್ಣನ ಕೆರೆ ಇವುಗಳ ಜತೆಗೆ ಎರಡು ಕಿರು ಅಣೆಕಟ್ಟುಗಳಿವೆ. ಇವುಗಳು ಜೈವಿಕ ಉದ್ಯಾನದ ಪ್ರಾಣಿಗಳಿಗೆ ನೀರಿನ ಮೂಲಗಳಾಗಿವೆ. ಇತ್ತೀಚೆಗೆ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಎರಡು ಕೊಳವೆ ಬಾವಿಗಳನ್ನು ಬೊಮ್ಮಸಂದ್ರದ ಗೌರಮ್ಮ ತಿಮ್ಮಾರೆಡ್ಡಿ ಪ್ರತಿಷ್ಠಾನದಿಂದ ಕೊರೆಯಿಸಲಾಗಿದ್ದು, ಉತ್ತಮ ನೀರು ದೊರೆತಿದೆ. ನೀರಿನ ಪೂರೈಕೆಗೆ ವಿದ್ಯುತ್ ಸಮಸ್ಯೆಯಾಗದಂತೆ ಸಂಪೂರ್ಣ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಫೌಂಡೇಷನ್ ಮಾಡಿದೆ. ಈ ಕೊಳವೆ ಬಾವಿಗಳಲ್ಲಿಯೂ ಉತ್ತಮ ನೀರಿದ್ದು ಉದ್ಯಾನದ ಟ್ಯಾಂಕರ್‌ಗಳ ಮೂಲಕ ಅವಶ್ಯಕವಿರುವೆಡೆಗೆ ಸರಬರಾಜು ಮಾಡುತ್ತಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಕೆರೆಗೆ ವಲಸೆ ಬಂದಿರುವ ಬಣ್ಣದ ಕೊಕ್ಕರೆಗಳು ಆಹಾರದ ಬೇಟೆಯಲ್ಲಿ ತೊಡಗಿವೆ. ಬನ್ನೇರುಘಟ್ಟ ಉದ್ಯಾನದ ಜತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ದೊಡ್ಡಣ್ಣನ ಕೆರೆಯಲ್ಲಿ ನೀರು ಉತ್ತಮವಾಗಿದ್ದು, ರಾಷ್ಟ್ರೀಯ ಉದ್ಯಾನದ ಕಾಡುಪ್ರಾಣಿಗಳಿಗೆ ಪ್ರಮುಖ ಜಲಮೂಲವಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಸಿಲ ಬೇಗೆಯಲ್ಲಿದ್ದ ಜಿಲ್ಲೆಯ ಜನರಿಗೆ ತಂಪೆರೆದ ಮಳೆ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೊಮ್ಮಸಂದ್ರ ಗೌರಮ್ಮ ತಿಮ್ಮಾರೆಡ್ಡಿ ಪ್ರತಿಷ್ಠಾನದಿಂದ ಕೊಳವೆ ಬಾವಿ ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ. ಆನೆ, ಚಿರತೆ, ಕಾಡೆಮ್ಮೆ, ಕಡವೆಗಳು ಕೆರೆಯನ್ನು ಅವಲಂಬಿಸಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದು, ಈ ಪೈಕಿ 50ಕ್ಕೂ ಹೆಚ್ಚು ಕೆರೆಗಳಲ್ಲಿ ಉತ್ತಮ ನೀರಿರುವುದಾಗಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.