ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಯತ್ನ ನಡೆಸಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಶೆಟ್ಟಿ ಮಾಣಿ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 4ರಂದು ರಾತ್ರಿ, ಬಂಟ್ವಾಳದ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ಒಂದು ಮನೆಯ ದನದ ಕೊಟ್ಟಿಗೆಯಿಂದ ಕಿಡಿಗೇಡಿಗಳು ದನವನ್ನು ಕಳವು ಮಾಡಿ ಹತ್ಯೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಶೆಟ್ಟಿ ಮಾಣಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ನರಸಿಂಹ ಶೆಟ್ಟಿ ಮಾಣಿ ಘಟನೆಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿರುವುದಲ್ಲದೆ, ಎರಡು ಧರ್ಮಗಳ ನಡುವೆ ದ್ವೇಷ ಮತ್ತು ವೈರತ್ವವನ್ನು ಉಂಟುಮಾಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿರುವುದಾಗಿ ತಿಳಿದುಬಂದಿದೆ. ಈ ಕೃತ್ಯದಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಹಾಗೂ ಸಾರ್ವಜನಿಕರಲ್ಲಿ ಭಯಭೀತಿ ಮೂಡುವ ಸಾಧ್ಯತೆಗಳಿದ್ದವು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಕಾನೂನು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನರಸಿಂಹ ಶೆಟ್ಟಿ ಮಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.