ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರೂ ನಗರದ ಮೂವರು ಅನಾಥ ಹೆಣ್ಣು ಮಕ್ಕಳ ತಾಯಿಯಾಗಿರುವ ಓರ್ವ ವಿಧವೆಗೆ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ವತಿಯಿಂದ ನೀಡಿದ, ದಿನಬಳಕೆಯ ವಸ್ತುಗಳ ಮಾರಾಟದ ಶಾಂತಿ ಜನರಲ್ ಸ್ಟೋರ್ ಅನ್ನು ಹಸ್ತಾಂತರಿಸಲಾಯಿತು.
ಬೋಳಂಗಡಿಯ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಳ್ ಮದನಿಯವರು ಅಂಗಡಿಯನ್ನು ಉದ್ಘಾಟಿಸಿದರು.
“ದುಡಿಯುವ ಕೈಗಳಿಗೆ ಶಕ್ತಿ ನೀಡುವ ಇಂತಹ ಸೇವೆಗಳು ಅತ್ಯುತ್ತಮವಾದುದೆಂದು ಶ್ಲಾಘಿಸಿ, ಇದಕ್ಕೆ ನೆರವಾದ ಮತ್ತು ಪರಿಶ್ರಮಿಸಿದ ಎಲ್ಲರಿಗೂ ಸೃಷ್ಟಿಕರ್ತನು ತಕ್ಕುದಾದ ಪ್ರತಿಫಲ ನೀಡಿ ಅನುಗ್ರಹಿಸಲಿ” ಎಂದು ಪ್ರಾರ್ಥಿಸಿದರು.
ಊರಿನ ಪ್ರಮುಖರಾದ ಪಿ. ಎಸ್. ಅಬ್ದುಲ್ ಹಮೀದ್, ಉಮರ್ ಕಾಸರಗೋಡು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್‌ರವರು ಮಾತನಾಡುತ್ತಾ, ಇಸ್ಲಾಮ್ ಧರ್ಮದಲ್ಲಿ ಆರಾಧನೆಗಳಂತೆಯೇ, ಇಂತಹ ಸೇವಾ ಚಟುವಟಿಕೆಗಳಿಗೂ ಬಹಳ ಪ್ರಾಧಾನ್ಯತೆ ಇದೆ. ಜಮಾಅತೆ ಇಸ್ಲಾಮೀ ತನ್ನ ಆರಂಭದ ದಿನದಿಂದಲೇ ಸಮಾಜ ಸೇವೆಗೆ ಬಹಳ ಮಹತ್ವ ಕಲ್ಪಿಸಿಕೊಂಡು ಬಂದಿದೆ ಎಂದರು.
ಸಮಾಜ ಸೇವಾ ಘಟಕ, ಮಂಗಳೂರು ಸದಸ್ಯರಾದ ಮುಹಮ್ಮದ್ ಮುಹ್ಸಿನ್ ಮಾತನಾಡುತ್ತಾ, “ನಮ್ಮ ಸಮಾಜ ಸೇವಾ ಘಟಕ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಸೇವೆಗಳನ್ನು ಸಮರ್ಪಿಸುತ್ತಲೇ ಬಂದಿದೆ. ಇದು ಅದರದ್ದೇ ಮುಂದುವರಿದ ಭಾಗ” ಎಂದು ಸಮಾರೋಪದ ನುಡಿಗಳೊಂದಿಗೆ ಶುಭ ಹಾರೈಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಸಮಾಜ ಸೇವಾ ಘಟಕದ ಅಧ್ಯಕ್ಷರಾದ ಕಾಸಿಮ್ ಚೆಂಡಾಡಿ, ಆದಂ, ಇಬ್ರಾಹಿಂ ಚೆಂಡಾಡಿ, ಸಲೀಂ ಬೋಳಂಗಡಿ, ಮುಹಮ್ಮದ್ ಬೋಳಂಗಡಿ, ಶಂಶೀರ್ ಮೆಲ್ಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

