ಬೀದರ್ ನಗರದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಪರ ಸಂಘಟನೆಗಳು ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿಗಳ ಸಹಯೋಗದಲ್ಲಿ ನಾಳೆ (ಸೆ.3) ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಬಸವ ಸಂಸ್ಕೃತಿ ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಸೆ.1ರಿಂದ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೆವಾಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಉದ್ಘಾಟನೆಗೊಂಡಿದ್ದು, ನಾಡಿನ ಎಲ್ಲ ಜಿಲ್ಲೆಗಳಲ್ಲಿ ಈ ಅಭಿಯಾನ ಜರುಗಲಿದೆ. ಅಕ್ಟೊಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ಜರುಗಲಿದೆʼ ಎಂದರು.
ʼಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಮಾರೋಪ ಭಾಷಣ ಮಾಡುವರು. ಸೆ.2ರಂದು ಕಲಬುರಗಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಜರುಗಲಿದ್ದು, ಸೆಪ್ಟೆಂಬರ್ 3 ರಂದು ಬಸವಣ್ಣನವರ ಭಾವಚಿತ್ರವಿರುವ ಬಸವ ರಥ ಬೀದರ್‌ಗೆ ಬಂದು ಬಸವ ಸಂಸ್ಕೃತಿ ಅಭಿಯಾನದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆʼ ಎಂದು ತಿಳಿಸಿದರು.
ಅಂದು ಬೆಳಗ್ಗೆ 11ಗಂಟೆಗೆ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಮೆರವಣಿಗೆಯನ್ನು ನಗರದ ಬಸವೇಶ್ವರ ವೃತ್ತದಿಂದ ಬಿ.ವಿ.ಭೂಮರೆಡ್ಡಿ ಕಾಲೇಜಿನವರೆಗೆ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಾಡಿನ ಸುಮಾರು 100ಕ್ಕೂ ಅಧಿಕ ಮಠಾಧೀಶರು ಮೆರವಣಿಗೆಯಲ್ಲಿ ಭಾಗವಹಿಸುವರುʼ ಎಂದು ಮಾಹಿತಿ ನೀಡಿದರು.
ʼಅಭಿಯಾನದಲ್ಲಿ 2 ಸಾವಿರ ಶರಣೆಯರು ಇಳಕಲ್ಲ ಸೀರೆ ಧರಿಸಿ ಹಾಗೂ 2 ಸಾವಿರ ಶರಣರು ಧೋತರ ಧರಿಸಿ ಮೆರವಣಿಗೆಯ ಶೋಭೆ ಹೆಚ್ಚಿಸಲಿದ್ದಾರೆ. 4 ರಿಂದ 8 ವರ್ಷದ ಮಕ್ಕಳು ಬಾಲ ಶರಣರ ವೇಷದಲ್ಲಿ ಆಕರ್ಷಿಸಲ್ಪಡುವರು. ಅದರಲ್ಲಿ ಮೂವರಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನ ವಿತರಿಸಲಾಗುವುದು. 24 ಕುದುರೆಗಳ ಮೇಲೆ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ, ಸರ್.ಎಂ.ವಿಶ್ವೇಶ್ವರಯ್ಯ, ಫ.ಗು ಹಳಕಟ್ಟಿ, ಸಿದ್ದೇಶ್ವರ ಸ್ವಾಮಿಗಳು ಸೇರಿದಂತೆ ಅನೇಕ ಮಹಾತ್ಮರ ವೇಷಧಾರಿಗಳು ಕುದುರೆಯನ್ನೇರಿ ಗಮನ ಸೆಳೆಯುವರು. ಈಗಾಗಲೇ ವಚನ ಕಂಠಪಾಠ ಸ್ಪರ್ಧೆ, ನಿಭಂದ ಸ್ಪರ್ಧೆ, ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಜರುಗಿವೆʼ ಎಂದು ತಿಳಿಸಿದರು.
ʼಸಂಜೆ 6 ಗಂಟೆಗೆ ನಗರದ ಬಿ.ವಿ ಭೂಮರಡ್ಡಿ ಮಹಾವಿದ್ಯಾಲಯದ ಅವರಣದಲ್ಲಿ ಸಾರ್ವಜನಿಕ ಸಮಾರಂಭ ಜರುಗುವುದು. ರಾತ್ರಿ 8.30 ಗಂಟೆಗೆ ಶಿವಸಂಚಾರ ಸಾಣೆಹಳ್ಳಿ ತಂಡದವರಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಜರುಗುವುದು. ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಇರುತ್ತದೆ. ಈ ಅಭಿಯಾನದಲ್ಲಿ ಬಸವಾದಿ ಶರಣರ ಭಿತ್ತಿ ಚಿತ್ರಗಳಿರುವ ‘ಬಸವ’ ರಥದ ಮೆರವಣಿಗೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ, ಪಾದಯಾತ್ರೆ, ಬಹಿರಂಗ ಸಭೆ, ವಚನ ಸಂಗೀತ, ಉಪನ್ಯಾಸ, ನಾಟಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆʼ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಭಾರತೀಯ ಬಸವ ಬಳಗ, ಬಸವ ಸಮಿತಿ, ಬಸವ ಕೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠ, ಬಸವಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಸರ್ವ ಶರಣ ಸಮಾಜದ ಸಂಘ ಸಂಸ್ಥೆಗಳು, ನೀಲಮ್ಮನ ಬಳಗಗಳು, ಮಹಿಳಾ ಸಂಘಟನೆಗಳು, ಬಸವತತ ಪ್ರೇಮಿಗಳು, ಸರ್ವ ಶರಣ ಬಂಧುಗಳು, ಪ್ರಗತಿಪರರು, ಯುವಕ-ಯುವತಿಯರು ಸೇರಿ ಸುಮಾರು 50 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವರು ಎಂದು ಧನ್ನೂರ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ʼಕೈಗೆ ಬಂದ ತುತ್ತುʼ ಕಸಿದ ಅತಿವೃಷ್ಟಿ : ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತರು!
ಸಮಿತಿಯ ಪದಾಧಿಕಾರಿಗಳಾದ ಜಯರಾಜ ಖಂಡ್ರೆ, ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ಸುರೇಶ ಚನಶೆಟ್ಟಿ, ಯೋಗೇಶ ಸಿರಿಗೆರೆ, ಯೋಗೇಂದ್ರ ಯದಲಾಪುರೆ, ಚಂದ್ರಶೇಖರ ಹೆಬ್ಬಾಳೆ, ಸಿದ್ದಯ್ಯ ಕಾವಡಿ, ಸುರೇಶ ಸ್ವಾಮಿ, ಜಗದೀಶ ಪಾಟೀಲ, ಗುಂಡಪ್ಪ ಬಳತೆ, ಅರವಿಂದ ಕಾರಬಾರಿ, ವೀರಶೆಟ್ಟಿ ಪಾಟೀಲ ಮರಖಲ್, ಉಷಾ ಮಿರ್ಚೆ, ಸುವರ್ಣಾ ಧನ್ನೂರ್, ನಿರ್ಮಲಾ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.