ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಯಕ್ಷರಂಗಾಯಣ ಕಾರ್ಕಳ ಇವರ ವತಿಯಿಂದ ಗುರುವಾರ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಆವರಣದಲ್ಲಿ ಬಿ.ವಿ ಕಾರಂತರ ನೆನಪು ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕವಿ, ಚಿಂತಕ ಹಾಗೂ ರಂಗಕರ್ಮಿ ಗುರುರಾಜ ಮಾರ್ಪಳ್ಳಿ, ಒಬ್ಬ ಮನುಷ್ಯ ಶ್ರೀಮಂತನಾಗಿದ್ದುಕೊಂಡು ಶ್ರೀಮಂತಿಕೆಯ ಲೇಪವಿಲ್ಲದೇ ಬದುಕುವುದು ಕಲಾವಿದನ ಶ್ರೇಷ್ಠ ಗುಣ. ಅಂತಹ ವ್ಯಕ್ತಿತ್ವವನ್ನು ಹೊಂದಿದವರು ಬಿ.ವಿ ಕಾರಂತರು. ನಾಟಕಗಳಿಗಾಗಿ ಬದ್ಧತೆಯಿಂದ ಕೆಲಸ ನಿರ್ವಹಿಸಿದ ಅವರು ನಾಟಕಗಳಿಗೆ ಹೊಸ ರೂಪವನ್ನು ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ, ಬಿ.ವಿ ಕಾರಂತರು ನಾಟಕಗಳಿಗೆ ಉತ್ಸಾವದ ಕಳೆಯನ್ನು ತುಂಬುವ ಜೊತೆಗೆ ನಾಟಕಗಳನ್ನು ಅತ್ಯಂತ ವಿಶಿಷ್ಟ ಶೈಲಿಯಲ್ಲಿ ರಚಿಸಿದವರು. ಬಿ.ವಿ ಕಾರಂತರು ದೇಶದ ವಿವಿಧ ಪ್ರದೇಶದ ಸಂಗೀತ ಪ್ರಕಾರಗಳಿಂದ ಸ್ಪೂರ್ತಿಯನ್ನು ಪಡೆದುಕೊಂಡು ಹೊಸ ಬಗೆಯ ರಂಗ ಸಂಗೀತವನ್ನು ಸೃಷ್ಟಿ ಮಾಡುವ ಮೂಲಕ ದೇಶದ ರಂಗಭೂಮಿಗೆ ಹೊಸ ಜೀವವನ್ನು ತಂದು ಕೊಟ್ಟವರು ಎಂದರು.
ಈ ಸಂದರ್ಭದಲ್ಲಿ ಗುರುರಾಜ ಮಾರ್ಪಳ್ಳಿ ಮತ್ತು ನಿನಾದ ತಂಡವರಿಂದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಬಿ.ವಿ ಕಾರಂತರ ರಂಗಸಂಗೀತ ಕಾರ್ಯಕ್ರಮವು ನಡೆಯಿತು. ಕಾರ್ಕಳದ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಯಕ್ಷ ರಂಗಾಯಣ ರೆಪರ್ಟರಿ ತಂತ್ರಜ್ಞ ಚಂದ್ರನಾಥ ಬಜಗೋಳಿ ನಿರೂಪಿಸಿ, ವಂದಿಸಿದರು.