ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯು ಮೂರು ಪೆನೆಲ್‌ಗಳ ನಡುವೆ ಭಾರೀ ಪೈಪೋಟಿ ನಡೆದಿದ್ದು, ಆರೋಪ ಪ್ರತ್ಯಾರೋಪಗಳಿಂದ ಕೂಡಿದ್ದ ಈ ಚುನಾವಣೆ ಜಿಲ್ಲೆಯ ರಾಜಕೀಯ ವಲಯದಲ್ಲೂ ವಿಶೇಷ ಕುತೂಹಲಕ್ಕೆ ಕಾರಣವಾಗಿತ್ತು. ಸೆಪ್ಟೆಂಬರ್ 14ರಂದು ನಡೆದ ಮತದಾನದ ಫಲಿತಾಂಶದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಪೆನೆಲ್ 11 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದರೆ, ರೈತ ಹಿತರಕ್ಷಣಾ ಸಮಿತಿ ಪೆನೆಲ್ 7 ಸ್ಥಾನಗಳಿಗೆ ತೃಪ್ತಿಪಟ್ಟಿತು.
ಶ್ರೀ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಫಲಿತಾಂಶವು ಕೇವಲ ನಿರ್ದೇಶಕರ ಸ್ಥಾನಗಳ ಸೋಲು-ಗೆಲುವಿನ ಲೆಕ್ಕಾಚಾರವಲ್ಲದೆ ಇದು ಸ್ಥಳೀಯ ರಾಜಕೀಯ ಸಮೀಕರಣಗಳು, ನಾಯಕತ್ವದ ಪ್ರಭಾವ ಮತ್ತು ಗ್ರಾಮೀಣ ರೈತ ಸಮಾಜದ ಮನೋಭಾವಗಳ ಪ್ರತಿಬಿಂಬವಾಗಿದೆ.
ಮಹಾದೇವಪ್ಪ ಯಾದವಾಡ ಪೆನೆಲ್ ಗೆಲುವಿಗೆ ಹಲವು ಅಂಶಗಳು ಕಾರಣವಾದವೆಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ.
ಫಲಿಸಿದ ಚುನಾವಣಾ ಪ್ರಚಾರ ಶೈಲಿ
ಮಹಾದೇವಪ್ಪ ಯಾದವಾಡ ಪೆನೆಲ್‌ನ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಲ್ಲಣ್ಣ ಯಾದವಾಡ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಯನ್ನು ಸಾಲ ಮಕ್ತವನ್ನಾಗಿ ಮಾಡಿರುವುದು, 11 ಕೋಟಿ ರೂಪಾಯಿ ಎಫ್‌ಡಿ ಇಟ್ಟಿರುವುದು, 39.7% ಡಿವಿಡೆಂಟ್ ನೀಡಿರುವುದು, ಉತ್ತಮ ಗುಣಮಟ್ಟದ ಸಕ್ಕರೆಯನ್ನು ಷೇರುದಾರರಿಗೆ ವಿತರಣೆ ಮಾಡಿರುವುದು ಹೀಗೆ ಅನೇಕ ಸಾಧನೆಗಳನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದದ್ದು ಇವರ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಮಹಾದೇವಪ್ಪ ಯಾದವಾಡರ ವೈಯಕ್ತಿಕ ವರ್ಚಸ್ಸು:
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ರಾಮದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ದೀರ್ಘಕಾಲದ ಜನಸಂಪರ್ಕ, ಅವರು ಮಾಡಿದ ಕಾರ್ಯಗಳು ಹಾಗೂ 2004ರಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾರ್ಖಾನೆಯನ್ನು ಅಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೂಲಕ ಸಚಿವ ಸಂಪುಟದಲ್ಲಿ ಕಾರ್ಖಾನೆಯ ಮರುಸ್ಥಾಪನೆಗೆ ಮಹಾದೇವಪ್ಪ ಯಾದವಾಡ ಪಟ್ಟ ಶ್ರಮ ಹಾಗೂ ಅವರ ನಾಯಕತ್ವವು ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದರು. ಸಕ್ಕರೆ ಕಾರ್ಖಾನೆ ಚುನಾವಣೆಯ ಗೆಲುವಿಗೆ ಪ್ರಮುಖವಾದ ಅಂಶಗಳಲ್ಲಿ ಇದೂ ಒಂದಾಗಿದೆ.
ಸಕ್ಕರೆ ಕಾರ್ಖಾನೆಯ ಚುನಾವಣೆ ಮೇಲಿನ ಹಿಡಿತ
ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯ ಮೇಲೆ ಮಹಾದೇವಪ್ಪ ಯಾದವಾಡ ಕುಟುಂಬಕ್ಕೆ ಬಿಗಿ ಹಿಡಿತವಿದ್ದು, ಮಹಾದೇವಪ್ಪ ಮತ್ತು ಮಲ್ಲಪ್ಪ ಯಾದವಾಡ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾರ್ಖಾನೆ ಚುನಾವಣೆಯ ಕಾರ್ಯತಂತ್ರವು ಸಹೋದರರಿಗೆ ಕರಗತವಾಗಿರುವುದು ಈ ಚುನಾವಣೆಯ ಗೆಲುವಿಗೆ ಕಾರಣವಾಗಿದೆ.
ಗ್ರಾಮೀಣ ಭಾಗದ ಜನರೊಂದಿಗೆ ನಿರಂತರ ಸಂಪರ್ಕ
ಮೂಲತಃ ಗ್ರಾಮೀಣ ಭಾಗದವರಾಗಿರುವ ಮಹಾದೇವಪ್ಪ ಯಾದವಾಡ ಕುಟುಂಬವು ಗ್ರಾಮೀಣ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತದಾರರನ್ನು ಸೆಳೆಯಲು ಸರಳವಾಗಿದ್ದು, ಗ್ರಾಮೀಣ ಮತದಾರರು ಇವರ ಪೆನೆಲ್ ಜತೆ ನಿಲ್ಲುವಂತೆ ಮಾಡಿದೆ.
ಈ ಎಲ್ಲ ಅಂಶಗಳು ಒಟ್ಟಾಗಿ ಮಹಾದೇವಪ್ಪ ಯಾದವಾಡ ಪೆನೆಲ್‌ಗೆ ಸ್ಪಷ್ಟ ಜಯ ತಂದುಕೊಟ್ಟಿವೆ ಎಂದು ರಾಜಕೀಯ ವಲಯದಲ್ಲಿ ಊಹಿಸಲಾಗಿತ್ತಿದೆ.
ಇದನ್ನೂ ಓದಿದ್ದೀರಾ? ಇಂಡಿ | ಕಾರ್ಖಾನೆಗೆ ಆರ್ಥಿಕ ಸಹಾಯ ನೀಡುವಂತೆ ಸರ್ಕಾರಕ್ಕೆ ಮನವಿ: ಶಾಸಕ ಯಶವಂತರಾಯಗೌಡ ಪಾಟೀಲ
ಕಾರ್ಖಾನೆಯ ಮುಂದಿನ ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿಗಾಗಿ ಹೊಸ ಆಡಳಿತವು ಯಾವ ರೀತಿಯ ಕಾರ್ಯತಂತ್ರ ರೂಪಿಸುತ್ತದೆ ಎಂಬುದರತ್ತ ಇದೀಗ ಎಲ್ಲರ ಗಮನ ಹರಿದಿದೆ.
ಈ ಗೆಲುವು ಅಂತಿಮ ಗುರಿಯಲ್ಲ. ಈಗ ನೂತನ ಆಡಳಿತದ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ. ಕಾರ್ಖಾನೆಯ ಮುಂದಿನ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಸಹಕಾರ ಚಳುವಳಿಯ ವಿಶ್ವಾಸ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಮತದಾರರು ನೀಡಿರುವ ಬೆಂಬಲವನ್ನು ಗೌರವಿಸಿ, ನೈಜ ಅರ್ಥದಲ್ಲಿ ರೈತರ ಆಧಾರವಾಗುವಂತೆ ಈ ಪೆನೆಲ್ ಕಾರ್ಯನಿರ್ವಹಿಸಬೇಕಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು