ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದ ಕುಲಕರ್ಣಿ ಗಲ್ಲಿ, ಪಾಟೀಲ ಗಲ್ಲಿ ಹಾಗೂ ಕೋಲಕಾರ ಗಲ್ಲಿ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಇದರಿಂದ ಬೇಸತ್ತ ಸ್ಥಳೀಯ ಯುವಕ ಹಾಗೂ ಯೂಟ್ಯೂಬರ್ ಈಶ್ವರ ಶಿಲೇದಾರ ಅವರು ಪ್ರವಾಹದ ರೀತಿಯಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲೇ ಸುಮಾರು ಮೂರು ಗಂಟೆ ಧರಣಿ ನಡೆಸಿ ಗಮನ ಸೆಳೆದರು.
ಮಳೆಗಾಲ ಆರಂಭವಾಗುವ ಮುನ್ನವೇ ರಸ್ತೆ ಹಾಗೂ ಚರಂಡಿ ದುರಸ್ತಿ ಮಾಡಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವಕ ಆರೋಪಿಸಿದರು.

ಧರಣಿಯ ವೇಳೆ ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಕುಳಿತಿದ್ದ ಅವರು, ನೀರು ತಲೆಯ ಮಟ್ಟದವರೆಗೆ ಹರಿಯುತ್ತಿದ್ದರೂ ಸ್ಥಳ ಬಿಟ್ಟು ಕದಲದೆ ಪ್ರತಿಭಟನೆ ಮುಂದುವರಿಸಿದರು. ಈ ದೃಶ್ಯಗಳ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಚರ್ಚೆಗೆ ಕಾರಣವಾದವು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ಭಾಗ್ಯಶ್ರೀ ಹುಗ್ಗಿ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ವಿಜಯ ಬೋಳನ್ನವರ ಅವರು ಮಳೆ ನೀರು ಸರಾಗವಾಗಿ ಹರಿದುಹೋಗಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಈಶ್ವರ ಶಿಲೇದಾರ ಅವರು ಧರಣಿ ಹಿಂಪಡೆದು ಮನೆಗೆ ಮರಳಿದರು.
ಜನರ ಪ್ರಶ್ನೆ:
ಮಳೆಗಾಲದ ಮೊದಲು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದೇಕೆ ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬರುತ್ತಿದೆ.