ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ ಹಾಗೂ ಒಬಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ದುರ್ಬಳಕೆ ಖಂಡಿಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಬಾ. ಪಾಟೀಲ ಅವರು ರಾಮದುರ್ಗ ತಾಲೂಕು ಪಂಚಾಯತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದರು.
ಪ್ರಕರಣದ ಹಿನ್ನೆಲೆ ಹಾಗೂ ಆರೋಪಗಳು:
ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನರೇಗಾ ಭ್ರಷ್ಟಾಚಾರ ಸಾಬೀತಾದ ಪ್ರಕರಣಗಳಲ್ಲಿ ಸರ್ಕಾರದ ದುರ್ಬಳಕೆಯಾದ ಹಣವನ್ನು 2 ತಿಂಗಳ ಒಳಗಾಗಿ ತಪ್ಪಿತಸ್ಥರಿಂದ ವಸೂಲಿ ಮಾಡಲು ನರೇಗಾ ಒಂಬುಡ್ಸ್‌ಮನ್ ಆದೇಶಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು
ಓಬಳಾಪುರ ಹಾಗೂ ಮುದೇನೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ₹17 ಲಕ್ಷ, ರಾಮದುರ್ಗ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ₹31 ಲಕ್ಷ ಹಾಗೂ ಇಲಾಖಾ ತನಿಖೆಯಡಿ ₹62 ಲಕ್ಷಕ್ಕೂ ಅಧಿಕ ಸರ್ಕಾರದ ಹಣ ದುರ್ಬಳಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾತ್ರಿ 11:30ಕ್ಕೆ ಸತ್ಯಾಗ್ರಹ ಅಂತ್ಯ:
ದಿನಪೂರ್ತಿ ನಡೆದ ಉಪವಾಸ ಸತ್ಯಾಗ್ರಹದ ತೀವ್ರತೆಯನ್ನು ಅರಿತ ರಾಮದುರ್ಗ ತಾಲೂಕು ಪಂಚಾಯತಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕ್ರಿಯೆ ಜರುಗಿಸಲಾಗುವುದು ಎಂದು ರಾತ್ರಿ 11:30ರ ಸುಮಾರಿಗೆ ಅಧಿಕಾರಿಗಳು ನೀಡಿದ ಖಚಿತ ಭರವಸೆಯ ಮೇರೆಗೆ ಶ್ರೀನಿವಾಸಗೌಡ ಪಾಟೀಲ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದರು.




