ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ ಕುಟುಂಬ ಕಲಹ ಭೀಕರ ತಿರುವು ಪಡೆದುಕೊಂಡಿದ್ದು, ನೈಟಿ ಧರಿಸಿದ್ದ ವಿಚಾರಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ನಡೆದಿದೆ.
ಕೃಷ್ಣಾಜಿ ಪಾಟೀಲ್ ತನ್ನ ಪತ್ನಿ ಮಂಜುಳಾ ಪಾಟೀಲ್‌ಗೆ ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿದ್ದಾನೆ. ಮಂಜುಳಾಗೆ ಸುಮಾರು 80 ಶೇಕಡಾ ಸುಟ್ಟ ಗಾಯಗಳಾಗಿದ್ದು, ಪ್ರಾಥಮಿಕವಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.
ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳ ನಡುವೆ, ಪತ್ನಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುವ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ವಿಚಾರ ಮತ್ತೆ ವಾಗ್ವಾದಕ್ಕೆ ಕಾರಣವಾಗಿ, ಕೋಪದ ಹೊತ್ತಿನಲ್ಲಿ ಪತಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಗಲಾಟೆಯ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ನಂದಗಡ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.




