ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿನ ಎಸ್‍ಬಿಐ ಬ್ಯಾಂಕ್ ಎಟಿಎಂ ಮಷಿನ್ ಗ್ಲಾಸ್‍ನ ವಾಲ್, ಎರಡು ಸಿಸಿ ಟಿವಿ ಕ್ಯಾಮರಾಗಳ ಇನ್‍ಹೋಲ್ ಹಾಗೂ ಲಾಬಿ ಕ್ಯಾಮರಾಗಳನ್ನು ಹೊಡೆದು ಎಟಿಎಂ ಯಂತ್ರದಲ್ಲಿರುವ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರು ಯುವಕರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಶೋಭರಾಣಿ ವಿ ಜೆ ತಿಳಿಸಿದರು.
ಸುದ್ಧಿ ಗೋಷ್ಠಿಯನ್ನು ನಡೆಸಿ ಮಾತನಾಡಿ, “ಜುಲೈ 31ರ ರಾತ್ರಿ ಜೆ. ಅವಿನಾಶ್ (27) ಮತ್ತು ಕೆ ಜಿ ಶಿವರಾಜ್ (29) ಇಟ್ಟಿಗೆಗಳಿಂದ ಎಟಿಎಂ ಮಷಿನ್‍ನ ಗ್ಲಾಸ್ ವಾಲ್ ಧ್ವಂಸ ಮಾಡಿದ್ದು ಅಲ್ಲದೇ, ಕ್ಯಾಮೆರಾ ಹಾಗೂ ಎಟಿಎಂ ಯಂತ್ರವನ್ನು ಹೊಡೆದು ಹಾಳು ಮಾಡಿರುತ್ತಾರೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಳ್ಳಾರಿ ಡಿಎಸ್‍ಪಿ ನಂದರೆಡ್ಡಿ ಮತ್ತು ಸಿರುಗುಪ್ಪ ಉಪ ವಿಭಾಗದ ಡಿಎಸ್‍ಪಿ ಡಾ. ಸಂತೋಷ ಚವ್ಹಾಣ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ, ತನಿಖೆಯನ್ನು ನಡೆಸಲಾಗಿತ್ತು.
ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಕೇವಲ 30 ತಾಸುಗಳೊಳಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ವಾಹನ, ಆಯುಧವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುವಂತೆ ಎಐಕೆಕೆಎಂಎಸ್ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ. ರವಿಕುಮಾರ್ ಮತ್ತು ಸಿರುಗುಪ್ಪ ಉಪ ವಿಭಾಗದ ಡಿಎಸ್‍ಪಿ ಡಾ. ಸಂತೋಷ ಚವ್ಹಾಣ್ ಸೇರಿದಂತೆ ಕೌಲ್ ಬಜಾರ್ ಸರ್ಕಲ್ ಇನ್ಸ್ಪೆಕ್ಟರ್ ಸುಭಾಷ್, ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಹಾಗೂ ಸಿಬ್ಬಂದಿ ಇದ್ದರು.