ಮೊಬೈಲ್ ಫೋನ್ ಬಿಟ್ಟು ಚೆಸ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಬುದ್ಧಿಶಕ್ತಿಯ ಜತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಬಹುದು ಎಂದು ಬಳ್ಳಾರಿಯ ತಿರುಮಲ ಶಾಲೆಯ ಅಧ್ಯಕ್ಷ ಯಲ್ಲಪ್ಪ ತಿಳಿಸಿದರು.
ತಾಲೂಕಿನ ಗೋಡೆಹಾಳ್ ಗ್ರಾಮದ ತಿರುಮಲ ಹೈಸ್ಕೂಲ್ ನಲ್ಲಿ ಬಳ್ಳಾರಿ ಜಿಲ್ಲಾ ಚೆಸ್ ಚಾಂಪಿಯನ್ ಅಸೋಸಿಯೇಷನ್, ತಿರುಮಲ ಹೈಸ್ಕೂಲ್ ಹಾಗೂ ವಿನಾಯಕ ಎಜುಕೇಶನ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ, ತಿರುಮಲ ಬ್ರೈನ್ ಫೋರ್ಸ್ ಚೆಸ್ ಫೆಸ್ಟಿವಲ್ 2025ರ ಅಂಡರ್ 16 ಓಪನ್ ಕೆಟಗರಿ ಚೆಸ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

“ಇಂದಿನ ಉನ್ನತ ತಂತ್ರಜ್ಞಾನದಲ್ಲಿ ರಾಕೆಟ್‌ಗಳೊಂದಿಗೆ ಓಡಾಡುತ್ತಿರುವ ಜನರು ಮೊಬೈಲ್, ಫೋನ್‌ಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯ ಸಮಯ, ವಯಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ. ಹುಟ್ಟಿನಿಂದ ವೃದ್ಧಾಪ್ಯದವರೆಗೆ ಮೊಬೈಲ್ ಫೋನ್ ಇಲ್ಲದಿದ್ದರೆ ಅವರು ಚಿಂತಿತರಾಗುತ್ತಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ತಮ್ಮ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಲು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಮೆದುಳಿಗೆ ವಿಶೇಷವಾಗಿ ಒಳ್ಳೆಯದಾದ ಚೆಸ್ ಬಗ್ಗೆ ಉತ್ಸಾಹ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಮಾಜಿ ಅರೆ ಸೈನಿಕರಿಂದ ಗಾಂಧಿ ಜಯಂತಿ ಆಚರಣೆ
8 ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳು ಐದು ವಿಭಾಗಗಳಲ್ಲಿ ಸುಮಾರು 350 ವಿದ್ಯಾರ್ಥಿಗಳು ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 8 ವರ್ಷದೊಳಗಿನ ಮತ್ತು 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಒಟ್ಟು ಐದು ಬ್ಯಾಚ್‌ಗಳಿಗೆ ಪ್ರತಿ ಬ್ಯಾಚ್‌ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಪ್ರಮಾಣಪತ್ರ, ಪದಕ ಮತ್ತು ಟ್ರೋಫಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ಚೆಸ್ ಚಾಂಪಿಯನ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಪೋಲೊ ಪ್ರವೀಣ್, ಜಿಲ್ಲಾಧ್ಯಕ್ಷ ವಿರೂಪಾಕ್ಷಯ್ಯ, ಇಂಗ್ಲಿಷ್ ಶಿಕ್ಷಕರಾದ ಪ್ರಕಾಶ್, ತಿರುಮಲ ಶಾಲೆಯ ಮುಖ್ಯ ಗುರುಗಳಾದ ನಾಗರಾಜು, ಪ್ರಮೋದ್ ರಾಜ ಮೋರೆ, ಜಗದೀಶ್ ಕೋರಿ, ಎಸ್ಎಸ್ಎಂಡಿ ರಫೀಕ್, ಮೌನೇಶ್ವರ ಆಚಾರ್ಯ, ಕಪ್ಪಗಲ್ಲು ಶಾರದಾ ಶಾಲೆಯ ಅಧ್ಯಕ್ಷರಾದ ಪರಮೇಶಪ್ಪ, ತಿಪ್ಪಣ, ಗಂಗಾ, ಇಶಾಕ್ ಹಾಗೂ ಇತರ ಸಿಬ್ಬಂದಿ ಇದ್ದರು.