ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆಯ ಕೊಡುಗೆ ಅಪಾರವಾದದ್ದು, ಎಸ್.ಎಲ್.ಬೈರಪ್ಪ ಸಾಹಿತ್ಯ ಕೃಷಿಯಲ್ಲಿಯೇ ಒಂದು ಹೊಸ ಸಂಚಲನ ಮೂಡಿಸಿ ಅಪಾರ ಓದುಗ ಬಳಗ ಸೃಷ್ಟಿಸಿದರು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಆಂಗ್ಲ ಭಾಷಾ ಮುಖ್ಯಸ್ಥ ಪ್ರೊ.ಶಾಂತನಾಯಕ್ ತಿಳಿಸಿದರು.
ನಗರದ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಳ್ಳಾರಿ ಹಾಗೂ ಸಂಸ್ಕಾರ ಭಾರತಿ ಬಳ್ಳಾರಿ ಮಹಾನಗರ ಇವರುಗಳ ಸಹಯೋಗದಲ್ಲಿ ನಗರದ ಬಿಪಿಎಸ್‌ಸಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ “ಭೈರಪ್ಪನವರ ಸ್ಮರಣೆ ಹಾಗೂ ನಾಡಹಬ್ಬ ದಸರಾ ಕವಿಗೋಷ್ಠಿ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಭೈರಪ್ಪ ಕಾದಂಬರಿ ಸಾಹಿತ್ಯ ಲೋಕಕ್ಕೆ ಹೊಸ ಭಾಷ್ಯ ಬರೆದವರು. ಅವರ ಕಾದಂಬರಿಗಳಲ್ಲಿ ಪೌರಾಣಿಕ ಸಂಗತಿಯನ್ನು ಇತಿಹಾಸದ ಕನ್ನಡಿಯಲ್ಲಿಟ್ಟು ನೋಡುತ್ತಾರೆ. ಹಾಗಾಗಿ ಅವರ ಕಾದಂಬರಿಗಳು ಓದುಗರಿಗೆ ಅಪ್ಯಾಯಮಾನವಾಗಿವೆ. ಹಾಗೆಯೇ ನಾಡ ಹಬ್ಬದ ಈ ಸಂದರ್ಭದಲ್ಲಿ ಕವಿಗೋಷ್ಠಿ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ. ಜನಪರವಾದ ಕಾವ್ಯಗಳಿಂದ ನಮ್ಮನಾಡು ಶ್ರೀಮಂತವಾಗಿದೆ. ಉದಯೋನ್ಮುಖ ಕವಿಗಳಿಂದ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳಲಿ” ಎಂದು ಶುಭ ಹಾರೈಸಿದರು. ಕಾದಂಬರಿಕಾರ ಎಸ್ ಎಲ್ ಭೈರಪ್ಪ , ಕಲಾವಿದ ಯಶವಂತ್ ಸರದೇಶ್ ಪಾಂಡೆ ಇವರುಗಳ ನಿಧನ ಕನ್ನಡ ನಾಡು ನುಡಿಗೆ ಅಪಾರ ನಷ್ಟವನ್ನುಂಟು ಮಾಡಿದೆಯೆಂದು ವಿಷಾದ ವ್ಯಕ್ತಪಡಿಸಿದರು.
‘ಭೈರಪ್ಪನವರ ಬದುಕು ಬರಹʼ ಕುರಿತು ಪ್ರಾಧ್ಯಾಪಕ ಡಾ. ಸಿ ಕೊಟ್ರೇಶ್ ಮಾತನಾಡಿ, “ಭೈರಪ್ಪನವರು ಚಿಕ್ಕಂದಿನಿಂದಲೇ ಸಾಹಿತ್ಯದ ಕಡೆ ಹೆಚ್ಚು ಒಲವುಳ್ಳವರಾಗಿದ್ದರು. ಅವರು ಸುಮಾರು 25 ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಬಹುತೇಕ ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಎಲ್ಲಾ ಕಾದಂಬರಿಗಳು ದೈತ್ಯರೂಪದಲ್ಲಿದ್ದು ಇವರ ಮೂರು ಕಾದಂಬರಿಗಳು ಮಾತ್ರ ಚಲನಚಿತ್ರವಾಗಿವೆ. ಪುರಾಣವನ್ನು ಇತಿಹಾಸಕರೀಣಗೊಳಿಸುವ ಕೆಲಸವನ್ನು ಪರ್ವ ಕಾದಂಬರಿ ಮಾಡಿದೆ. ಬೈರಪ್ಪರವರು ಪ್ರನಾಳ ಶಿಶುವಿನ ಕಲ್ಪನೆ ಕಟ್ಟಿಕೊಡುತ್ತಾರೆ. ಲೈಂಗಿಕತೆ ಹಾಗೂ ಸಾವು ಇವುಗಳ ವಿಶಿಷ್ಟತೆಯನ್ನು ವಿವರಿಸಿದ್ದಾರೆ. ಜಾತಿ ವ್ಯವಸ್ಥೆಯನ್ನು ರಾಜಕಾರಣಿಗಳು ಹೇಗೆ ಬಳಸಿಕೊಂಡರು ಎಂಬುದನ್ನು ಮತದಾನ ಕಾದಂಬರಿಯಲ್ಲಿ ವಿವರಿಸುತ್ತಾರೆ. ಮಂದ್ರ ಕಾದಂಬರಿಯಲ್ಲಿ ಸಂಗೀತದ ವಿವಿಧ ರಾಗಗಳನ್ನು ಚರ್ಚಿಸುತ್ತಾರೆ. ನಾಯಿ ನೆರಳು ಮೂರು ತಲೆಮಾರಿನ ಪುನರ್ಜನ್ಮದ ಕಥೆ, ದಾಟು ಕಾದಂಬರಿಯ ಮೂಲಕ ಜಾತಿ ವ್ಯವಸ್ಥೆಯನ್ನು ಹೇಗೆ ದಾಟಬಹುದು ಎಂಬುದನ್ನು ವಿವರಿಸಿದ್ದಾರೆ. ಕವಲು, ಆವರಣ ಕಾದಂಬರಿ ಕುರಿತು ಇಂದಿಗೂ ಸಾಕಷ್ಟು ಚರ್ಚೆಯಾಗುತ್ತಿವೆ. ಭಿತ್ತಿ ಆತ್ಮ ಚರಿತ್ರೆಯಲ್ಲಿ ತಮ್ಮ ಬಡತನದ ವಿಷಯಗಳನ್ನು ಚರ್ಚಿಸುತ್ತಾರೆ. ಇಂತಹ ಬಹುಮುಖ ಪ್ರತಿಭೆಯ ಕಾದಂಬರಿಕಾರನನ್ನು ಕನ್ನಡ ಸಾಹಿತ್ಯ ಲೋಕ ಕಳೆದುಕೊಂಡಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ವೀರಶೈವ ಕಾಲೇಜಿನ ನಿವೃತ್ತ ಪ್ರಾದ್ಯಾಪಕ ಡಾ. ಬಿ ಅರ್ ಮಂಜುನಾಥ ಮಾತನಾಡಿ, “ಪ್ರೀತಿಯ ಒರತೆಯೇ ಬೈರಪ್ಪನವರ ಕಾದಂಬರಿಯ ಬೀಜವಾಗಿತ್ತು. ಹಾಗೆಯೇ ನಾವೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಬಾಳೋಣ ದಸರಾ ಕವಿಗೋಷ್ಠಿ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ಡಾ. ಕೆ ಎನ್ ದಿವ್ಯಾ ಮಾತನಾಡಿ, “ಬೈರಪ್ಪನವರು ಕಷ್ಟದ ಕಡಲಲ್ಲಿ ಬೆಳೆದವರು. ವಾರಾನ್ನ ತಿಂದ ಹುಡುಗ ಸಾಹಿತ್ಯದ ಮೃಷ್ಟಾನ್ನ ಭೋಜನ ಉಣ ಬಡಿಸುತ್ತಾರೆ. ಮಹಾಭಾರತ ನಡೆಯುವ ಸ್ಥಳಕ್ಕೆ ಹೋಗಿ ಶೋಧಿಸಿ ಪರ್ವ ಕಾದಂಬರಿ ಬರೆಯುತ್ತಾರೆ. ಜರಾಸಂಧನ ಬಗ್ಗೆ ವಾಸ್ತವಿಕವಾಗಿ ಬರೆದರು. ಮಹಾಭಾರತ ಎಂದರೆ ಮನೆ ಮನೆ ಕಥೆಯಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭೈರಪ್ಪನವರ ಕೋರ್ಟ್‌ನಲ್ಲಿ ಜಡ್ಜಗೆ ಪ್ರಶ್ನೆ ಕೇಳಿದ ಸಂದರ್ಭ ವಿಶೇಷವಾಗಿತ್ತು” ಎಂದು ಬೈರಪ್ಪನವರ ಬದುಕಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೆಟ್ರ ಗುರುಶಾಂತಪ್ಪ ಪ.ಪೂ ಕಾಲೇಜಿನ ಉಪನ್ಯಾಸಕ, ಖ್ಯಾತ ಕಥೆಗಾರ ಡಾ. ಸಂಪಿಗೆ ನಾಗರಾಜ್ ಮಾತನಾಡಿ, “ಭೈರಪ್ಪನವರ ಕಾದಂಬರಿಗಳು ಬದುಕಿನ ದೊಡ್ಡ ಮೌಲ್ಯವನ್ನು ಹೇಳುತ್ತವೆ. ಭೈರಪ್ಪನವರು ತಮ್ಮ ಹುಟ್ಟೂರಿನ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ತಾಯಿ ಹೆಸರಿನಲ್ಲಿ ಟ್ರಸ್ಟ್ ಮಾಡಿ ತಮ್ಮ ಎಲ್ಲಾ ಆಸ್ತಿಯನ್ನು ಟ್ರಸ್ಟ್‌ಗೆ ಬರೆಯುತ್ತಾರೆ. ಇವರ ಕಾದಂಬರಿಗಳಲ್ಲಿ ತಾತ್ವಿಕತೆಯನ್ನು ಸಾರುತ್ತಾರೆ” ಎಂದರು ಕಾವ್ಯದ ಕುರಿತು ಮಾತನಾಡುತ್ತಾ ಕಾವ್ಯ ಮೀಮಾಂಸೆಯಲ್ಲಿ ಲಾಕ್ಷಣಿಕರು ಕಾವ್ಯದ ಲಕ್ಷಣ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಸಾಹಿತಿ ಕಾಲವನ್ನು ತಡೆದು ನಿಲ್ಲಿಸುವ ಶಕ್ತಿಯನ್ನು ಆವಾಹಿಸಿಕೊಳ್ಳಬೇಕು ಅಂದಾಗ ಆತನ ಕಾವ್ಯ ಸಾರ್ವಕಾಲಿಕವಾಗಿರುತ್ತದೆ, ಪಂಪ, ಪೊನ್ನ, ರನ್ನ, ಜನ್ನ ಹಾಗೂ ಕುಮಾರವ್ಯಾಸ ಇವರ ಕಾವ್ಯಗಳಲ್ಲಿ ಅಂತಹ ಶಕ್ತಿಯನ್ನು ನಾವು ಕಾಣಬಹುದಾಗಿದೆ. ಆ ಕಾಲದ ಭಾಷೆ ಮತ್ತು ಸಾಮಾಜಿಕ ಪ್ಪ್ರಜ್ಞೆ ಕವಿಗೆ ಬೇಕಾದ ಬಹುಮುಖ್ಯ ಗುಣವಾಗಿದೆ. ಕನ್ನಡ ಭಾಷೆಯಲ್ಲಿ ಅಪಾರವಾದ ಕಾವ್ಯಭಂಡಾರವಿದೆ. ಇಲ್ಲಿ ವಾಚನಗೊಂಡ ಎಲ್ಲಾ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ವರ್ತಮಾನದ ಪಲ್ಲಟಗಳು ಅಭಿವ್ಯಕ್ತಗೊಂಡವು” ಎಂದರು.
ಇದನ್ನೂ ಓದಿ: ಬಳ್ಳಾರಿ | ಮಾಜಿ ಅರೆ ಸೈನಿಕರಿಂದ ಗಾಂಧಿ ಜಯಂತಿ ಆಚರಣೆ
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, “ಸುಪ್ತ ಪ್ರತಿಭೆಯನ್ನು ಮುನ್ನೆಲೆಗೆ ತರುವ ಹಾಗೂ ಅಗಲಿದ ಮಹಾನ್ ಚೇತನಗಳಿಗೆ ನುಡಿ ನಮನ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ಆಯೋಜಿಸುವ ಆಶಯವನ್ನು ಶರಣ ಸಾಹಿತ್ಯ ಪರಿಷತ್ತು ಹೊಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಮುನ್ಸಿಪಲ್ ಕಾಲೇಜಿನ ಪ್ರಾಚಾರ್ಯ ಕೆ. ಸುಂಕಪ್ಪ, ಕು ವಿಭಾ ಕುಲಕರ್ಣಿ, ಕೆ.ವಿ.ನಾಗಿರೆಡ್ಡಿ, ಡಾ. ತಿಪ್ಪೇರುದ್ರ ಸಂಡೂರು, ಎ.ಎರ್ರಿಸ್ವಾಮಿ, ಡಾ.ಭ್ರಮರಾಂಭ, ಹೆಚ್ ಎಂ ಉಮಾ,ಸಂತೋಷ್, ಆಲಂ ಭಾಷ, ಗೋಡೆ ಶಿವರಾಜ್, ರಾಮರಾವ್ ಕುಲಕರ್ಣಿ, ಎ ಮಲ್ಲಿಕಾರ್ಜುನ, ವೀರೇಶ ಸ್ವಾಮಿ, ಡಾ. ಕೆ ಬಸಪ್ಪ, ಈರಮ್ಮ, ಎ ಎಂ ಪಿ ವೀರೇಶ ಸ್ವಾಮಿ, ಚಾಂದ್ ಪಾಷಾ, ಕವಿಗಳು ಹಾಗೂ ಇತರರು ಇದ್ದರು.