ಪ್ಯಾನ್-ಇಂಡಿಯಾ ರಕ್ಷಣೆ ಹಾಗೂ ಪುನರ್ವಸತಿ ಅಭಿಯಾನದ ಅಂಗವಾಗಿ ಕಾರ್ಮಿಕ ಇಲಾಖೆಯು ಧಾರವಾಡ ಜಿಲ್ಲೆಯ ಹಲವೆಡೆ ದಾಳಿ ನಡೆಸಿ ಮೂವರು ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ, ಜಿಂದಾಲ್ ಮೊದಲನೇ ಗೇಟ್ ಮಂಭಾಗ ಹಾಗೂ ಹೊಸಪೇಟೆ ಬೈಪಾಸ್ ರಸ್ತೆಯ ಮುಂತಾದ ಉದ್ದಿಮೆಗಳ ಮೇಲೆ ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಆಕಸ್ಮಿಕವಾಗಿ ದಾಳಿ ನಡೆಸಲಾಗಿದೆ.
ತೋರಣಗಲ್‌ನ ನಾಡಕಚೇರಿಯಲ್ಲಿ ಶನಿವಾರ ಸಂಡೂರು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಈ ಬಾಲಕಾರ್ಮಿಕರ ಆಕಸ್ಮಿಕ ದಾಳಿ ಕಾರ್ಯಕ್ರಮ ಕೈಗೊಳ್ಳಲಾಗಿದ್ದು, ವಶಕ್ಕೆ ಪಡೆದುಕೊಂಡು ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿಯೇ ಪಡೆದುಕೊಳ್ಳಲಾಗಿ, ಆ ಮಕ್ಕಳನ್ನು ಶಿಕ್ಷಣ ಇಲಾಖೆ ಹಾಗೂ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.
ಎಲ್ಲಾ ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ ನೀಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ: ಬಳ್ಳಾರಿ | ಬಗರ್ ಹುಕುಂ ಸಾಗುವಳಿದಾರರಿಗೆ ವಸತಿ ಹಕ್ಕು ಮಾನ್ಯ ಮಾಡಲು ಆಗ್ರಹ
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಸಂಡೂರು ತಹಶೀಲ್ದಾರ್ ಅನೀಲ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಎಸ್.ಖೈನೂರು, ಸಂಡೂರು ಕಾರ್ಮಿಕ ನಿರೀಕ್ಷಕ ಮಂಜುನಾಥ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೀರಭದ್ರಯ್ಯ ಹಿರೇಮಠ, ತೋರಣಗಲ್ಲು ಪಂಚಾಯತಿ ಅಭಿವೃದ್ದಿ ಅಧಿಕಾರಿ ಕಲ್ಲಪ್ಪ, ಕೈಗಾರಿಕಾ ವಿಸ್ತರಣಾಧಿಕಾರಿ ಚೈತ್ರ ಎನ್.ಕೆ., ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಕಂದಾಯ ಅಧಿಕಾರಿ ಗಣೇಶ್, ರೀಚ್ ಸಂಸ್ಥೆಯ ಸಂಯೋಜಕ ಹನುಮಂತಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.