ಕಬ್ಬಿಣ, ಮ್ಯಾಂಗನೀಸ್ ಅದಿರಿನ ಅಕ್ರಮ ಗಣಿಗಾರಿಕೆಯಿಂದ ಗಣಿಭಾದಿತವಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ ಹಾಗು ಚಿತ್ರದುರ್ಗ ತಾಲೂಕಿನ ಪ್ರದೇಶಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆ ಆರ್ ಎಸ್)ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದ ತಂಡವು 2025ರ ಜುಲೈ 17ರ ಗುರುವಾರ ಭೇಟಿ ನೀಡಲಿದೆ.
ತುಮಕೂರು ಜಿಲ್ಲೆಯಲ್ಲಿನ ಗಣಿಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿರುವ ತಂಡವು, ಈ ಸಂದರ್ಭದಲ್ಲಿ ಗಣಿಗಾರಿಕಾ ಪ್ರದೇಶಗಳಿಗೆ ಹಾಗು ಸುತ್ತಲಿನ ಕೆಲವು ಹಳ್ಳಿಗಳಿಗೆ ಭೇಟಿ ನೀಡಿ ಗಣಿಗಾರಿಕೆಯಿಂದ ಆಗಿರುವ ಅನಾಹುತಗಳು, ಅದರಿಂದ ಜನರಿಗಾಗುತ್ತಿರುವ ತೊಂದರೆಗಳು ಮತ್ತು ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಯೋಜನೆಗಳ ಪರಿಶೀಲನೆ ನಡೆಸಲಿದ್ದಾರೆ.
2005 ರಿಂದ 2011 ರವರೆಗಿನ ಅಕ್ರಮ ಗಣಿಗಾರಿಕೆಯ ಸಂದರ್ಭದಲ್ಲಿ ನಡೆದಷ್ಟೇ ಮಟ್ಟದಲ್ಲಿ ಇಂದು ಸಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಹಿಂದೆ ನಡೆದ ಗಣಿಗಾರಿಕೆಯಿಂದ ಪರಿಸರ, ಕೃಷಿ, ಆರೋಗ್ಯ ಮತ್ತು ಒಟ್ಟಾರೆ ಜನಜೀವನದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಿತ್ತು. ಇದನ್ನು ಸರಿಪಡಿಸಲು ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆಗಳು ಮತ್ತೆ ಮರುಕಳಿಸುತ್ತಿದ್ದು, ಈ ನಿಟ್ಟಿನಲ್ಲಿ.ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸಾವಿರಾರು ಕೋಟಿ ಹಣ ಇದ್ದರೂ ಸಹ ಯಾವುದೇ ಕ್ರಮ ವಹಿಸಲಾಗುತ್ತಿಲ್ಲ. ಗಣಿಗರಿಕೆಯಿಂದ ಸಂಗ್ರಹವಾಗಿರುವ ಈ ಹಣವನ್ನು ಹೇಗೆ ಕೊಳ್ಳೆಹೊಡೆಯುವುದು ಎನ್ನುವುದರ ಬಗ್ಗೆಯೆ ಈ ಭಾಗದ ಬಹುತೇಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಯೋಜನೆಯಾಗಿದ್ದು, ಜನರ ಜೀವನ ಉತ್ತಮಪಡಿಸುವ ಬಗ್ಗೆ ಕಾಳಜಿ ಕಾಣಿಸುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ
ಇಂತಹ ಸಂದರ್ಭದಲ್ಲಿ, ಜನರ ಪರಿಸ್ಥಿತಿ ಮತ್ತು ಗಣಿಗಾರಿಕೆಯಿಂದ ಆಗಿರುವ ದುಷ್ಪರಿಣಾಮಗಳ ಬಗ್ಗೆ ತಿಳಿಯುವುದು ಮತ್ತು ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸಮಾನ ಮನಸ್ಕ ಸಂಘಟನೆಗಳು ಹಾಗೂ ಪಕ್ಷಗಳು ಸೇರಿ “ಗಣಿಭಾದಿತ ಪ್ರದೇಶಗಳ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿ” ರಚಿಸಲಾಗಿದ್ದು, ಇದರಲ್ಲಿ ಕೆ ಆರ್ ಎಸ್ ಪಕ್ಷವು ಕೂಡ ಭಾಗವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಬಾದಿತ ಜನರು, ಸಮಸ್ಯೆ ಎದುರಿಸುತ್ತಿರುವವರು ಅಥವಾ ಈ ಪ್ರಯತ್ನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ರವಿ ಕೃಷ್ಣಾರೆಡ್ಡಿ ಅವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಬಹುದು. ಹೆಚ್ಚಿನ ವಿವರಗಳಿಗೆ ಮಹೇಶ್.ಸಿ ನಗರಂಗೆರೆ -7892600106 / ಬಾಲರಾಜ-98445 20654 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮೂಲಗಳು ತಿಳಿಸಿವೆ.