ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಥಾರ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಬೆಳ್ತಂಗಡಿ ಕಡೆಯಿಂದ ಮೂಡಬಿದಿರೆ ಭಾಗಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಥಾರ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ವೇಣೂರಿನ ಮೇಲಿನಪೇಟೆಯಲ್ಲಿ ನಡೆದಿದೆ.
ಮೂಡಬಿದಿರೆಯ ಭಾಗಕ್ಕೆ ಹೋಗಲು ಪ್ರಯಾಣಿಕರನ್ನು ತುಂಬಿಕೊಂಡು ಬೆಳ್ತಂಗಡಿ ಕಡೆಯಿಂದ ಬಂದಿದ್ದ ಶ್ರೀಕೃಷ್ಣ ಹೆಸರಿನ ಖಾಸಗಿ ಬಸ್, ವೇಣೂರು ಮೇಲಿನ ಪೇಟೆಯಲ್ಲಿರುವ ನಮನ ಪೆಟ್ರೋಲ್ ಬಂಕ್ ಬಳಿಯ ತಿರುವಿನಲ್ಲಿ ಬಸ್‌ನ ಸ್ಟೀರಿಂಗ್ ಜಾಮ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೆಳ್ತಂಗಡಿಯ ಭಾಗಕ್ಕೆ ತೆರಳುತ್ತಿದ್ದ ಥಾರ್ ಜೀಪ್‌ನ ಮುಂಭಾಗಕ್ಕೆ ನೇರವಾಗಿ ಬಡಿದಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಥಾರ್ ಜೀಪ್ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕೂಡಲೇ ಮೂಡಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಜೆ 5.30ರ ಸುಮಾರಿಗೆ ನಡೆದಿರುವುದಾಗಿ ತಿಳಿದು ಬಂದಿದ್ದು, ಜೀಪ್ ಚಾಲಕನ ವಿವರ ಇನ್ನೂ ತಿಳಿದು ಬಂದಿಲ್ಲ. ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಥಾರ್ ಜೀಪ್‌ನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ವೇಣೂರು ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಾ, “ಥಾರ್ ಜೀಪ್ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಕೂಡಲೇ ಮೂಡಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ವಿವರವನ್ನು ಸಂಗ್ರಹಿಸುತ್ತಿದ್ದೇನೆ. ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಬಸ್ ಚಾಲಕ ಸ್ಟೀರಿಂಗ್ ಜಾಮ್ ಆದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.
