ಸಾರ್ವಜನಿಕ ಸಮಾವೇಶಗಳ ಮೂಲಕ ಹೃದಯಗಳ ಒಗ್ಗೂಡುವ ಕೆಲಸವಾಗಬೇಕು. ಎಲ್ಲಾ ಧರ್ಮದವರು ಸೇರಿಕೊಂಡು ಜೀವನ ನಡೆಸಿದಾಗ ಮಾತ್ರ ಅಖಂಡ ಭಾರತದ ಪರಿಕಲ್ಪನೆ ನೆರವೇರುತ್ತದೆ. ಧರ್ಮ ಧರ್ಮದ ಮಧ್ಯೆ ವೈರತ್ವ ಸಾಧಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಎಲ್ಲರೂ ಒಂದುಗೂಡಿ ಜೀವನ ಮಾಡಿದರೆ ಮಾತ್ರ ಭಾರತ ಶ್ರೀಮಂತ ದೇಶವಾಗಲು ಸಾಧ್ಯ ಎಂದು ಮೂಡುಬಿದಿರೆಯ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್’ ಘೋಷ ವಾಕ್ಯದಡಿ ಸೀರತ್ ಅಭಿಯಾನ ಜರುಗಿತು. ಇದರ ಪ್ರಯುಕ್ತ ನಡೆದ ʼಧಾರ್ಮಿಕ ಸೌಹಾರ್ದ ಸವಾಲುಗಳು ಮತ್ತು ಅವಕಾಶಗಳುʼ ಎಂಬ ಸಾರ್ವಜನಿಕ ಸಮಾವೇಶದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
“ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರು ತಮ್ಮ ಪರಿಸರದಲ್ಲಿ ಇರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿ ಸಂವಿಧಾನದ ಪುಸ್ತಕ ಸೇರಿದಂತೆ ಎಲ್ಲಾ ಧರ್ಮದ ಪುಸ್ತಕಗಳನ್ನು ಓದಿದರೆ ಇತರೆ ಧರ್ಮದ ಬಗ್ಗೆ ಜ್ಞಾನ ಪಡೆದುಕೊಳ್ಳಲು ಸಹಾಯವಾಗುತ್ತದೆ. ಭಾರತದಲ್ಲಿ ಎಲ್ಲಾ ಧರ್ಮದವರು ನೆಲೆಸಿದ್ದಾರೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮ, ಜಾತಿಗಳ ಮಧ್ಯೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಪೂಜೆ ಮಾಡುವ ದೇವರು ಒಬ್ಬನೇ. ಅದರೆ ಅವರು ಅನುಸರಿಸುವ ವಿಧಾನಗಳು ಮಾತ್ರ ಬೇರೆ ಬೇರೆಯಾಗಿದೆ ಅಷ್ಟೇ. ನಮ್ಮ ಧರ್ಮದ ಬಗ್ಗೆ ಯಾವ ರೀತಿಯಲ್ಲಿ ಗೌರವ, ಪ್ರೀತಿ ಹೊಂದಿರುತ್ತೇವೆ ಅದೇ ರೀತಿಯಲ್ಲಿ ಬೇರೆ ಧರ್ಮದ ಬಗ್ಗೆಯು ಅಷ್ಟೇ ಪ್ರೀತಿ ಗೌರವವನ್ನು ಹೊಂದಿರಬೇಕು” ಎಂದು ಸಲಹೆ ನೀಡಿದರು.

“ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡುವ ಸಂದರ್ಭದಲ್ಲಿ ಯಾರು ಕೂಡ ಜಾತಿ, ಧರ್ಮ ನೋಡಿ ಹೋರಾಟ ಮಾಡಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಯನ್, ಜೈನರು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು” ಎಂದರು.
ಮಂಗಳೂರು ಬರಕಾ ಇಂಟರ್‌ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಶರ್ಫುದ್ದೀನ್ ಬಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ ಸಿಂಹ ನಾಯಕ್, ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ ವಿಚಾರಗಳನ್ನು ಮಂಡಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ʼಕೊಂದವರು ಯಾರು?ʼ ಆಂದೋಲನದಿಂದ ಸೋನಿಯಾ ಗಾಂಧಿಗೆ ಪತ್ರ
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್, ವರ್ತಕ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ಯಹ್ಯಾ ತಂಬಳ್ ಮದನಿ, ವಿವಿಧ ಸಂಘಟನೆಗಳ ಮುಖಂಡರುಗಳಾದ ಪ್ರಸಾದ್ ರೈ, ಶೇಖರ ಕುಕ್ಕೇಡಿ, ದಿವಾಕರ ರಾವ್, ಆದು ಬ್ಯಾರಿ ಬೆಳ್ತಂಗಡಿ, ಶೇಕುಂಗ್ ಬೆಳ್ತಂಗಡಿ, ಉಮರ್ ಕುಂಞ ಮುಸ್ಲಿಯಾರ್, ಪಿ ಜಿ ಅಬ್ದುಲ್ ಹಮೀದ್, ಡಾ. ರಾಜಾರಾಮ್, ಮನೋಹರ್ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಬೆಳ್ತಂಗಡಿ ಸಂತೆಕಟ್ಟೆಯಿಂದ ಮಂಜುನಾಥ ಸ್ವಾಮಿ ಕಲಾ ಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.