ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿವರ್ಷ ವಿಂಡ್ಸನ್ ಮ್ಯಾನರ್ ಸರ್ಕಲ್‌ನಿಂದ ಶಿವಾನಂದ ಸರ್ಕಲ್‌ವರಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಚಿತ್ರಸಂತೆ ನಡೆಸುತ್ತಿದ್ದು, ಈ ಬಾರಿ ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದು ಎಂದು ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.
ನೈಜ ಹೋರಾಟಗಾರರ ವೇದಿಕೆ ಪರವಾಗಿ ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
“ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಕರ್ನಾಟಕ ಚಿತ್ರಕಲಾಪರಿಷತ್‌ನವರು ಕುಮಾರ ಕೃಪಾ ರಸ್ತೆಯಲ್ಲಿ ಚಿತ್ರಸಂತೆ ಆಯೋಜಿಸುತ್ತಿರುವುದು ತಮಗೆ ತಿಳಿದ ವಿಷಯವಾಗಿದೆ. ನೈಜ ಹೋರಾಟಗಾರರ ವೇದಿಕೆಯು ಈ ರೀತಿ ರಸ್ತೆ ಬಂದ್ ಮಾಡಿ ಚಿತ್ರಸಂತೆ ನಡೆಸುವುದನ್ನು ವಿರೋಧಿಸುತ್ತಿದ್ದು ರಸ್ತೆ ಬಂದ್ ಮಾಡಲು ಅವಕಾಶ ನೀಡಬಾರದೆಂದು ಈ ಹಿಂದೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ” ಹೆಚ್ ಎಂ ವೆಂಕಟೇಶ್ ಹೇಳಿದರು.
“ಬಹಳ ಮುಖ್ಯವಾಗಿ ಚಿತ್ರಸಂತೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಚಿತ್ರಕಲಾಕಾರರು ತಾವು ಬಿಡಿಸಿದ ಚಿತ್ರಗಳನ್ನು ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ. ನೈಜ ಹೋರಾಟಗಾರರ ವೇದಿಕೆಯು ಚಿತ್ರಕಲೆಯನ್ನು ಪ್ರೋತ್ಸಾಹಿಸುತ್ತಿದ್ದು, ಚಿತ್ರಕಲೆಯ ಬಗ್ಗೆ ಅಪಾರವಾದ ಗೌರವವಿರುತ್ತದೆ. ಆದರೆ ಸಾರ್ವಜನಿಕ ರಸ್ತೆ ಮತ್ತು ಪಾದಾಚಾರಿ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿ ಚಿತ್ರಸಂತೆ ನಡೆಸುವ ಬಗ್ಗೆ ಹಿಂದಿನಿಂದಲೂ ನಾವು ವಿರೋದ ವ್ಯಕ್ತಪಡಿಸುತ್ತ ಬಂದಿದ್ದೇವೆ” ಎಂದು ತಿಳಿಸಿದರು.
“ವಿಂಡ್ಸನ್ ಮ್ಯಾನರ್ ಸರ್ಕಲ್‌ನಿಂದ ಶಿವಾನಂದ ಸರ್ಕಲ್‌ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಾವು ಗಮನಿಸದಿರುವುದನ್ನು ಹಿಂದಿನ ಎಲ್ಲ ಚಿತ್ರಸಂತೆಯಲ್ಲಿ ನಾವು ನೋಡಿದ್ದೇವೆ. ಈ ಬಗ್ಗೆ ಉಲ್ಲೇಖದಲ್ಲಿ ತಮಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಆದರೆ ಈವರೆಗೆ ಏನೂ ಪ್ರಯೋಜನವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುವ ಈ ಚಿತ್ರಸಂತೆಗೆ ಅಂದಾಜು ಮೂರರಿಂದ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಈ ರಸ್ತೆಯಲ್ಲಿ ಬಂದು ಜಮಾಯಿಸುತ್ತಾರೆ. ಈ ರೀತಿ ಅಕ್ರಮವಾಗಿ ರಸ್ತೆಯನ್ನು, ಪಾದಾಚಾರಿ ಮಾರ್ಗವನ್ನು ಬಂದ್ ಮಾಡಲು ಅವಕಾಶ ಇರುವುದಿಲ್ಲ. ಪಾದಾಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುವುದೂ ಕೂಡ ಕಾನೂನಿಗೆ ವಿರುದ್ಧವಾಗಿರುತ್ತದೆಂದು ಸುಪ್ರೀಂ ಕೋರ್ಟ್ ಸೇರಿದಂತೆ ಹಲವಾರು ನ್ಯಾಯಾಲಯಗಳು ಆದೇಶ ಮಾಡಿವೆ. ಈ ಬಗ್ಗೆ ನಾವು ಹಿಂದೆ ಹಲವಾರು ಮನವಿಯನ್ನು ಮಾಡಿದರೂ ಪೊಲೀಸ್ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಇಂತಹ ಚಿತ್ರಸಂತೆಗೆ ನಗರದ ಹೃದಯ ಭಾಗದ ರಸ್ತೆಯನ್ನು ಬಂದ್ ಮಾಡಿಸಿ ಚಿತ್ರಕಲಾ ಪರಿಷತ್ತಿಗೆ ಸಹಾಯ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ” ಎಂದು ಹೇಳಿದರು.
“ನಾಗರಿಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಒಂದು ಚಿಕ್ಕ ಪ್ರತಿಭಟನೆ ಮಾಡಿದಾಗ ಸಂಚಾರಕ್ಕೆ ತೊಂದರೆಯಾಗುತ್ತದೆ. ಪಾದಾಚಾರಿಗಳಿಗೆ ತೊಂದರೆಯಾಗುತ್ತದೆಂದು ಪ್ರತಿಭಟನಾಕಾರರ ಮೇಲೆ ಕೇಸ್ ಹಾಕಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಹಾಗಾಗಿ ಪೊಲೀಸ್ ಆಯುಕ್ತರಾದ ತಾವು ಇಡೀ ರಸ್ತೆಯನ್ನು ಸಂಪೂರ್ಣವಾಗಿ ಇಡೀ ದಿನ ಬಂದ್ ಮಾಡಿ ಒಂದು ವರ್ಗದ ಜನಸಮೂಹಕ್ಕೆ ಸಹಾಯ ಮಾಡುತ್ತಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ” ಎಂದರು.
“ಈ ಹಿಂದೆ ಐಪಿಎಲ್ ಪಂದ್ಯಾವಳಿಯಲ್ಲಿ ಬೆಂಗಳೂರು ನಗರದಲ್ಲಿ ಆರ್‌ಸಿಬಿ ಕ್ರಿಕೆಟ್ ತಾರೆಯರನ್ನು ನೋಡಲು ಲಕ್ಷಾಂತರ ಜನ ಜಮಾಯಿಸಿ ಸುಮಾರು 11 ಮಂದಿ ಅಮಾಯಕರು ದುರ್ಮರಣ ಹೊಂದಿ 50ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿರುವ ವಿಷಯ ತಮ್ಮ ಗಮನದಲ್ಲಿದೆ. ಸರ್ಕಾರವು ಪೊಲೀಸ್ ಕಮಿಷನರ್ ಅವರನ್ನೇ ಅಮಾನತ್ತಿನಲ್ಲಿಟ್ಟಿರುವುದು ಮತ್ತು ವರ್ಗಾವಣೆ ಮಾಡಿರುವುದೂ ಕೂಡ ನಿಮ್ಮ ಗಮನದಲ್ಲಿದೆ. ನಾವು ಪ್ರತಿ ವರ್ಷವೂ ಕುಮಾರ ಕೃಪಾ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದನ್ನು ವಿರೋಧಿಸುತ್ತಿದ್ದೇವೆ ಮತ್ತು ಚಿತ್ರಸಂತೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಪಾದಾಚಾರಿ ಮಾರ್ಗದಲ್ಲಿ ಗುರುತುಗಳನ್ನು ಹಾಕಿ ಚಿತ್ರಕಲಾ ಪರಿಷತ್ತು ಆಡಳಿತ ಮಂಡಳಿಯು ತಲಾ ಎರಡು ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿದೆ ಎಂಬುದು ಕೂಡ ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಚಿತ್ರಕಲಾ ಪರಿಷತ್ ಆಡಳಿತ ಮಂಡಳಿ ಸಾರ್ವಜನಿಕ ರಸ್ತೆಯನ್ನು ಮತ್ತು ಪಾದಾಚಾರಿ ರಸ್ತೆಯನ್ನು ಈ ರೀತಿ ಅಕ್ರಮವಾಗಿ ಬಳಸಿಕೊಳ್ಳುವುದು ಅಥವಾ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡುವುದು ಪಾದಾಚಾರಿ ಮಾರ್ಗ ಮತ್ತು ಸಂಚಾರ ಮಾರ್ಗವನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಹೇಳಿದರು.
“ಈ ಹಿಂದಿನ ನಮ್ಮ ಎಲ್ಲ ಮನವಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ ಚಿತ್ರಸಂತೆ ಕಾರ್ಯಕ್ರಮಕ್ಕೆ ನಗರದ ಹೃದಯ ಭಾಗದಲ್ಲಿರುವ ಕುಮಾರ ಕೃಪಾ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಚಿತ್ರಕಲೆಯ ಹೆಸರಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ಆಸ್ಪದವನ್ನು ನೀಡಬಾರದು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಚಿತ್ರಕಲಾ ಪರಿಷತ್‌ನವರು ಚಿತ್ರಸಂತೆಯನ್ನು ಆಯೋಜಿಸುತ್ತಾರೆಂಬ ಮಾಹಿತಿ ನಮಗೆ ಇರುವುದರಿಂದ ಮುಂಜಾಗ್ರತೆ ಕ್ರಮಗಳನ್ನು
ಕೈಗೊಳ್ಳುವಂತೆ ಎರಡ್ಮೂರು ತಿಂಗಳ ಮೊದಲೇ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
“ಕುಮಾರ ಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತ ಚಿತ್ರಸಂತೆ ಆಯೋಜಿಸುವುದಕ್ಕೆ ಅವಕಾಶ ನೀಡುವಂತೆ ತಮಗೆ ಮನವಿ ಸಲ್ಲಿಸಿದಾಗ ಅದನ್ನು ಸಂಪೂರ್ಣವಾಗಿ ನಿರಾಕರಿಸಿ, ಅನುಮತಿಯನ್ನು ನೀಡಬಾರದೆಂದು ಈ ಮೂಲಕ ನಾವು ನಿಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ಕರ್ನಾಟಕ ಸರ್ಕಾರವು ಐಪಿಎಲ್ ಪಂದ್ಯದ ವಿಜಯೋತ್ಸವದಲ್ಲಿ ನಡೆದ ದಾರುಣ ಘಟನೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಒಂದು ಕಡೆ ಜಮಾವಣೆಯಾಗದಂತೆ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿರುವುದೂ ಕೂಡ ನಿಮಗೆ ತಿಳಿದಿದೆ. ಬೆಂಗಳೂರು ನಗರದಲ್ಲಿ ನಡೆಯುವ ಸಮಾವೇಶ, ವಸ್ತು ಪ್ರದರ್ಶನ ಇನ್ನಿತರ ಜನಸಂದಣಿಯಾಗುವ ಸಂದರ್ಭದಲ್ಲಿ ನಗರದ ಹೊರ ಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನ ಅಥವಾ ಮೇಕ್ರಿ ಸರ್ಕಲ್ ಬಳಿ ಇರುವ ಅರಮನೆ ಮೈದಾನ ಸ್ಥಳವನ್ನು ಬಳಸಬಹುದಾಗಿದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಅಧಿನಿಯಮ-2025 ಜಾರಿ: ದಶಕಗಳ ಹೋರಾಟಕ್ಕೆ ದೊರೆತ ನ್ಯಾಯ
“ಐಪಿಎಲ್ ಕ್ರಿಕೆಟ್ ಪಂದ್ಯದ ತಾರೆಯರನ್ನು ನೋಡಲು ಲಕ್ಷಾಂತರ ಜನರು ಜಮಾಯಿಸಿ ಆಗಿರುವ ಸಾವು ನೋವುಗಳನ್ನು ತಾವು ಗಮನದಲ್ಲಿಟ್ಟುಕೊಂಡು, ಕುಮಾರ ಕೃಪ ರಸ್ತೆ ಮತ್ತಿತರ ಸುತ್ತಮುತ್ತಲಿನ ರಸ್ತೆಗಳ ಬಡಾವಣೆ ನಿವಾಸಿಗಳಿಗೆ ಆಗುವ ತೊಂದರೆ ಮತ್ತು ಬಿಎಂಟಿಸಿ, ಟ್ಯಾಕ್ಸಿ, ಆ್ಯಂಬುಲೆನ್ಸ್, ಆಟೋರಿಕ್ಷಾ ಸೇರಿದಂತೆ ಇನ್ನಿತರ ಸಂಚಾರ ವಾಹನಗಳು ಮತ್ತು ಪಾದಾಚಾರಿಗಳ ಮೂಲಭೂತ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಚಿತ್ರಕಲಾ ಪರಿಷತ್ ಮುಂದಿನ ದಿನಗಳಲ್ಲಿ ಚಿತ್ರಸಂತೆ ಆಯೋಜಿಸಲು ಮನವಿ ಸಲ್ಲಿಸಿದಾಗ ಈ ಮೇಲ್ಕಂಡ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಅವರಿಗೆ ಕುಮಾರ ಕೃಪಾ ರಸ್ತೆ ಮತ್ತು ಪಾದಾಚಾರಿ ಮಾರ್ಗದಲ್ಲಿ ಚಿತ್ರಸಂತೆ ನಡೆಸಲು ಅನುಮತಿ ನೀಡಬಾರದು ಹಾಗೂ ನಮ್ಮ ಈ ಮನವಿಗೆ ತಾವುಗಳು ತೆಗೆದುಕೊಂಡ ಕ್ರಮಗಳ ಕುರಿತು ದಯವಿಟ್ಟು ನಮಗೆ ತಿಳಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡುಕೊಳ್ಳುತ್ತೇವೆ” ಎಂದು ಕೋರಿದರು.
ಈ ವೇಳೆ ನೈಜ ಹೋರಾಟಗಾರರ ವೇದಿಕೆ ಯುವ ಹೋರಾಟಗಾರ ಬಿ ಎಸ್ ಲೋಕೇಶ್, ಸಾಮಾಜಿಕ ಕಾರ್ಯಕರ್ತ ಕುಣಿಗಲ್ ನರಸಿಂಹಮೂರ್ತಿ ಇದ್ದರು.