ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯತಿಯಲ್ಲಿ ಭಾರೀ ಅಕ್ರಮ ಬೆಳಕಿಗೆ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡಾವಣೆಗಳ ಅಭಿವೃದ್ಧಿಗಾಗಿ ‘ಪ್ರಗತಿ ಕಾಲೋನಿ’ ಯೋಜನೆಗೆ ಮೀಸಲಿಟ್ಟಿದ್ದ ನಿಧಿ ದುರ್ಬಳಕೆಯಾಗಿದೆ. ಯೋಜನೆಯ ಹಣವನ್ನು, ಕನಿಷ್ಠ ಒಬ್ಬರೂ ವಾಸವಿಲ್ಲದ ಖಾಲಿ ಜಾಗದಲ್ಲಿ ಲೋಕೋಪಯೋಗಿ ಇಲಾಖೆಯ ಸಿಸಿ ರಸ್ತೆ ನಿರ್ಮಿಸಲು ಬಳಸಲಾಗಿದೆ. ಈ ಮೂಲಕ ಬರೋಬ್ಬರಿ 50 ಲಕ್ಷ ರೂಪಾಯಿ ಅನುದಾನಕ್ಕೆ ಕನ್ನ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಶಾಸಕರಿಂದಲೇ ಚಾಲನೆ ಪಡೆದಿದ್ದ ಈ ಕಾಮಗಾರಿ ಈಗ ಪೂರ್ಣಗೊಂಡಿದೆ. ಯೋಜನೆಯ ಹೆಸರಿನಲ್ಲಿ ನಡೆದಿರುವ ಈ ಕಾಮಗಾರಿಯ ಹಿಂದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸ್ಪಷ್ಟ ನಿರ್ಲಕ್ಷ್ಯ ಹಾಗೂ ಗೋಲ್‌ಮಾಲ್ ಎದ್ದುಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಎಸ್‌ಸಿ/ಎಸ್‌ಟಿ ಸಮುದಾಯಗಳು ಹೆಚ್ಚಾಗಿ ವಾಸಿಸುವ ಕಾಲೋನಿಗಳು, ಹಾಡಿಗಳು ಹಾಗೂ ತಾಂಡಾಗಳನ್ನು ‘ಮಾದರಿ ಕಾಲೋನಿ’ಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ‘ಪ್ರಗತಿ ಕಾಲೋನಿ’ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿಯ ಅನುದಾನ ಮತ್ತು ‘ವಿಶೇಷ ಕೇಂದ್ರ ನೆರವು’ (SCA) ನಿಧಿಯಿಂದ ಹಣ ಒದಗಿಸಲಾಗುತ್ತದೆ. ಇದರ ಮೂಲಕ ದಲಿತರ ವಸತಿ ಪ್ರದೇಶಗಳಲ್ಲಿ ಸಿಸಿ ರಸ್ತೆ, ವೈಜ್ಞಾನಿಕ ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುದ್ದೀಕರಣ ಹಾಗೂ ಸಮುದಾಯ ಭವನಗಳಂತಹ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ, ಹಾದ್ರಿಪುರದಲ್ಲಿ ದಲಿತರ ಕೇರಿಯ ಅಭಿವೃದ್ಧಿಗೆ ಬಳಸಬೇಕಾದ ಈ ಯೋಜನೆಯ ಹಣವನ್ನು, ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಕಾಮಗಾರಿ ನಡೆಸುವ ಮೂಲಕ ಸಂಪೂರ್ಣ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜೂನ್ 8 ರಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದರು. ಪ್ರಸ್ತುತ ಅರ್ಧ ಕಿಲೋಮೀಟರ್ ವ್ಯಾಪ್ತಿಯ ಸಿಸಿ ರಸ್ತೆ ಕಾಮಗಾರಿ ಮುಗಿದಿದ್ದು, ರಸ್ತೆ ನಿರ್ವಹಣೆಗಾಗಿ ಸ್ಥಳೀಯ ಗ್ರಾಮ ಪಂಚಾಯತಿಗೆ ಹಸ್ತಾಂತರವೂ ಆಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ‘ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾದ್ರಿಪುರ ಪರಿಶಿಷ್ಟ ಜಾತಿ ಜನವಸತಿ ಕಾಲೋನಿಗೆ ಸಿ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿ’ ಎಂದು ಅಧಿಕೃತ ಫಲಕವನ್ನೂ ಅಳವಡಿಸಲಾಗಿದೆ. ಆದರೆ, ವಾಸ್ತವದಲ್ಲಿ ರಸ್ತೆ ನಿರ್ಮಿಸಲಾದ ಜಾಗದಿಂದ ದಕ್ಷಿಣಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಹಾದ್ರಿಪುರ ಗ್ರಾಮವಿದ್ದರೆ, ಉತ್ತರಕ್ಕೆ ಹಾದ್ರಿಪುರ ಗ್ರಾಮದ ಕಾಲೋನಿ ಇದೆ. ರಸ್ತೆ ಇರುವ ಜಾಗದ ಸುತ್ತಮುತ್ತ ಯಾವುದೇ ಜನವಸತಿಯೇ ಇಲ್ಲದಿರುವುದು ತೀವ್ರ ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.
ಇನ್ನೊಂದೆಡೆ, ಹಾದ್ರಿಪುರ ಗ್ರಾಮದಲ್ಲಿ ಸುಮಾರು 120ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಜನರು ವಾಸಿಸುತ್ತಿದ್ದು, ಅಲ್ಲಿನ ದಲಿತ ಕಾಲೋನಿಯು ಮೂಲಸೌಕರ್ಯಗಳಿಲ್ಲದೆ ಕಂಗಾಲಾಗಿದೆ. ಕಾಲೋನಿಯಲ್ಲಿ ಚರಂಡಿ ನಿರ್ಮಿಸಿ ದಶಕಗಳೇ ಕಳೆದುಹೋಗಿದ್ದು, ಸಂಪೂರ್ಣ ಹಾಳಾಗಿದೆ. ಈ ಹಿಂದೆ, ಪಂಚಾಯತಿ ಹಾಕಿದ್ದ ಸಿಸಿ ರಸ್ತೆಯನ್ನು ಜೆಜೆಎಂ (ಜಲ ಜೀವನ್ ಮಿಷನ್) ಕಾಮಗಾರಿಯ ಸಂದರ್ಭದಲ್ಲಿ ಕಿತ್ತುಹಾಕಲಾಗಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಇಲ್ಲಿನ ಅಂಬೇಡ್ಕರ್ ಭವನವೂ ಸಹ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಗ್ರಾಮಸ್ಥರು ಹೊಸ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅಧಿಕಾರಿಗಳು ಮತ್ತು ಪಂಚಾಯತಿ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

ಮನವಿ ಸಲ್ಲಿಸಿದಾಗೆಲ್ಲ, ‘ನಮ್ಮ ಬಳಿ ಯಾವುದೇ ಫಂಡ್ ಇಲ್ಲ’ ಎಂಬ ಹಾರಿಕೆ ಉತ್ತರ ಸಿಗುತ್ತಿತ್ತು. ಆದರೆ, ಈಗ ಪರಿಶಿಷ್ಟರ ಹೆಸರಿನಲ್ಲಿ ಬಂದ 50 ಲಕ್ಷ ರೂಪಾಯಿ ಹಣವನ್ನು, ಪರಿಶಿಷ್ಟ ಸಮುದಾಯಕ್ಕೆ ಯಾವುದೇ ಸಂಬಂಧವೇ ಇಲ್ಲದ, ಜನ ಸಂಚಾರವೇ ಇಲ್ಲದ ಜಾಗದಲ್ಲಿ ರಸ್ತೆ ನಿರ್ಮಿಸಲು ಬಳಸಲಾಗಿದೆ. ಪಂಚಾಯತಿಯ ಈ ಕ್ರಮದ ವಿರುದ್ಧ ಸ್ಥಳೀಯ ದಲಿತ ಯುವಜನರು ಮತ್ತು ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.




