ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 200ಕ್ಕು ಹೆಚ್ಚು ಅಕ್ರಮ ವಲಸಿಗರನ್ನು ಗಡಿಪಾಡು ಮಾಡಲಾಗಿದೆ. ಎಫ್‌ಆರ್‌ಆರ್‌ಒ ಅಧಿಕಾರಿಗಳು ಅಕ್ರಮ ವಲಸಿಗರನ್ನು ಗುರುತಿಸಿ ನಮಗೆ ಮಾಹಿತಿ ನೀಡುತ್ತಾರೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಒಂದು ದಿನ ಮಾಡಿ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.
ಕಟ್ಟಡ ಕಾರ್ಮಿಕರಾಗಿ ಹೆಚ್ಚಿನ ಜನ ಇದ್ದಾರೆ ಎಂದು ಯಾರೋ ಹೇಳುತ್ತಾರೆ. ಅದನ್ನು ಪರಿಶೀಲಿಸಿ, ಅಂಥವರು ಕಂಡುಬಂದರೆ ಕಸ್ಟಡಿಗೆ ತೆಗೆದುಕೊಂಡು ಗಡಿಪಾರು ಮಾಡುತ್ತೇವೆ ಎಂದರು.
ಅಕ್ರಮ ನುಸುಳುಕೋರರ ಬಗ್ಗೆ ಮೃದು ಧೋರಣೆ ತೋರಲು ಏನು ಉಪಯೋಗ ಇದೆ. ಬಾಂಗ್ಲಾ ದೇಶದವರನ್ನು ಕರೆಸಿಕೊಂಡು ಮತ ಹಾಕಿಸಿಕೊಳ್ಳುವಂತಹ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಎಂ.ಬಿ.ಪಾಟೀಲರ ಹೇಳಿಕೆ ಉದ್ಧಟತನದ ಪರಮಾವಧಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಕಳೆದ ವಾರ ನನ್ನನ್ನು ಭೇಟಿಗೆ ಕರೆದಿದ್ದರು. ಅವರು ಕರೆದಾಗ ನಾನು ಊರಲ್ಲಿ ಇದ್ದ ಕಾರಣ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಮತ್ತೆ ಕರೆದರೆ ಭೇಟಿಯಾಗುತ್ತೇನೆ ಎಂದರು.
ರಂಭಾಪುರಿ ಶ್ರೀಗಳ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸೋಲುದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿನ ಕೊಲೆಯತ್ನ ಪ್ರಕರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆರೋಪಿತರು ಬಂಧನವಾಗಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಕೊಟ್ಟಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಿಂದ ಪ್ರೆರೇಪಿತರಾಗುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಆ ರೀತಿಯಾಗಿ ಸಮಾಜದಲ್ಲಿ ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆಯೇ ಎಂಬುದರ ಕುರಿತು ಮನಶಾಸ್ತ್ರಜ್ಞರು ಅಧ್ಯಯನ ನಡೆಸಬೇಕು ಎಂದರು.