ಬೆಂಗಳೂರು ನಗರದ ನಾಗರಿಕರಿಗೆ ಸಮರ್ಥ ಮತ್ತು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅನ್ನು ರಚಿಸಲಾಗಿದ್ದು, ಇದರಡಿ ಐದು ನಗರ ಪಾಲಿಕೆಗಳು ಕಾರ್ಯನಿರ್ವಹಿಸಲಿವೆ. ಇಂದು ಜಿಬಿಎ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತಿಹಾಸದ ಪುಟಗಳಲ್ಲಿ ಸೇರ್ಪಡೆಗೊಂಡಿದೆ.
ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಮಹಾನಗರ ಪಾಲಿಕೆಗಳನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ಪಾಲಿಕೆಗೂ ಅಂದಾಜು 100 ವಾರ್ಡ್ಗಳು ರಚನೆಯಾಗಲಿದ್ದು, ಒಟ್ಟು 500 ಹೊಸ ನಾಯಕರು ಉದಯಿಸಲಿದ್ದಾರೆ. ಇದರಲ್ಲಿ ಶೇ. 50 ಮಹಿಳೆಯರ ಮೀಸಲಾತಿ ಇದೆ. ವಿಧಾನಸಭಾ ಕ್ಷೇತ್ರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ವಾರ್ಡ್ ವಿಂಗಡಣೆ ಮಾಡಲಾಗುವುದು. ನವೆಂಬರ್ 1, 2025ರಂದು ವಾರ್ಡ್ ಪುನರ್ವಿಂಗಡಣೆಯ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ ಮತ್ತು ನವೆಂಬರ್ 30ರಂದು ಮೀಸಲಾತಿಯ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು.
ಜಿಬಿಎಯ ಮುಖ್ಯ ಆಯುಕ್ತರಾಗಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿದ್ದು, ಐದು ನಗರ ಪಾಲಿಕೆಯ ಆಯುಕ್ತರು ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲ ವಲಯಗಳಿಗೂ ಆಯಾ ವಲಯದಲ್ಲಿರುವ ಅಧಿಕಾರಿಗಳನ್ನು ನೇಮಿಸಲಾಗಿದೆ. 27 ವಿಭಾಗಗಳನ್ನು 50 ವಿಭಾಗಗಳಾಗಿ ಮತ್ತು 75 ಉಪ ವಿಭಾಗಗಳನ್ನು 150 ಉಪ ವಿಭಾಗಗಳಾಗಿ ಪರಿವರ್ತಿಸಲಾಗಿದೆ. ನಾಳೆಯಿಂದ ಸಂಗ್ರಹವಾಗುವ ತೆರಿಗೆಯು ಸಂಬಂಧಪಟ್ಟ ನಗರ ಪಾಲಿಕೆಗೆ ಸೇರಲಿದ್ದು, ಸರ್ಕಾರದ ಹಣ ಜಿಬಿಎಗೆ ಮತ್ತು ಜಿಬಿಎಯ ಹಣ ಸರ್ಕಾರಕ್ಕೆ ಅಗತ್ಯಕ್ಕೆ ತಗಲಲಿದೆ ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಿಕ್ಕು ತಪ್ಪಿಸುವ ದೃಶ್ಯಮಾಧ್ಯಮಗಳು ಮತ್ತು ಧರ್ಮಯಾತ್ರೆಗಳು
ಐದು ಪಾಲಿಕೆಗಳಿಗೆ ನೂತನ ಆಯುಕ್ತರ ನೇಮಕವೂ ಆಗಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ರಾಜೇಂದ್ರ ಚೋಳನ್, ಪೂರ್ವ ನಗರ ಪಾಲಿಕೆಗೆ ರಮೇಶ್ ಜಿ.ಎಸ್ (ಅಪರ ಆಯುಕ್ತೆ ಸ್ನೇಹಲ್ ಸುಧಾಕರ್), ಉತ್ತರ ನಗರ ಪಾಲಿಕೆಗೆ ಪೊಮ್ಮಳ ಸುನಿಲ್ ಕುಮಾರ್, ದಕ್ಷಿಣ ನಗರ ಪಾಲಿಕೆಗೆ ರಮೇಶ್ ಕೆ.ಎನ್ (ಅಪರ ಆಯುಕ್ತ ಪಾಂಡುರಾಹುಲ್ ತುಕರಾಮ್) ಮತ್ತು ಪಶ್ಚಿಮ ನಗರ ಪಾಲಿಕೆಗೆ ರಾಜೇಂದ್ರ ಕೆ.ವಿ ಅವರನ್ನು ನೇಮಿಸಲಾಗಿದೆ. ಯಾವುದೇ ರಾಜಕಾರಣಿಗಳ ಹೆಸರನ್ನು ಪಾಲಿಕೆಗಳಿಗೆ ಇರಿಸಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, ಐದು ಮೇಯರ್ಗಳು ಇರುತ್ತಾರೆ ಮತ್ತು ಪ್ರತಿಯೊಬ್ಬರಿಗೂ ಎರಡೂವರೆ ವರ್ಷಗಳ ಅವಧಿ ನೀಡಲಾಗುತ್ತದೆ ಎಂದರು.
ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗ ಮುಗಿಸಿದ ನಂತರ ಚುನಾವಣೆ ನಡೆಯಲಿದ್ದು, ನವೆಂಬರ್ ಬಳಿಕ ಇದನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಜುಲೈ 25ರಂದು 55 ಜನರು ತಕರಾರು ಸಲ್ಲಿಸಿದ್ದರು ಮತ್ತು 5 ಮಹಾನಗರ ಪಾಲಿಕೆ ಕಡತಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. 120 ದಿನಗಳ ಕಾಲ ಪ್ರಾಧಿಕಾರ ರಚಿಸಿ ಆದೇಶಿಸಲಾಗಿದ್ದು, 75 ಜನರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ನವೆಂಬರ್ 30, 2025ರ ನಂತರ ಅರ್ಜಿ ಸಲ್ಲಿಸಿ ಎಂದು ಸಮಯ ನೀಡಿದೆ ಎಂದು ತಿಳಿಸಿದರು.
ಇಂದು ಇತಿಹಾಸದ ಪುಟಕ್ಕೆ ಬೆಂಗಳೂರು ಸೇರಿದ್ದು, ಸಹಕಾರದ ನಿಟ್ಟಿನಲ್ಲಿ ಐದು ಪಾಲಿಕೆಗಳನ್ನು ರಚಿಸಲಾಗಿದೆ. ನವೆಂಬರ್ 1ರಂದು ಎಲ್ಲ ಪಾಲಿಕೆಗಳಿಗೆ ಹೊಸ ಕಚೇರಿಗಳ ಭೂಮಿ ಪೂಜೆ ನಡೆಯಲಿದ್ದು, ಐದು ಪಾಲಿಕೆಗಳೂ ಒಂದೇ ರೀತಿಯ ವಿನ್ಯಾಸ ಹೊಂದಿರಬೇಕು. ಜಿಬಿಎ ಮತ್ತು ಪಾಲಿಕೆಗಳಿಗೆ ಲೋಗೋ ರಚಿಸಲು ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದ್ದು, ಜಿಬಿಎ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. 74ನೇ ತಿದ್ದುಪಡಿಯನ್ನು ಮುಟ್ಟದೆ, ಪಾಲಿಕೆಗಳಿಗೆ ಮೀಸಲಾತಿ ಮತ್ತು ಚುನಾವಣಾ ಅಧಿಕಾರ ನೀಡಲಾಗಿದೆ. ಇದರಿಂದ ನಗರದಲ್ಲಿ ಉತ್ತಮ ಸೇವೆ ಮತ್ತು ಆಡಳಿತ ಲಭ್ಯವಾಗಲಿದೆ ಎಂದು ಡಿ ಕೆ ಶಿವಕುಮಾರ್ ವಿವರಿಸಿದರು.