ಕರ್ನಾಟಕ ಸರ್ಕಾರ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹರೆಂದು ಗುರುತಿಸಿ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲು ಕೈಗೊಂಡಿರುವ ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕೆಂದು ನಗರದ ನೂರಕ್ಕೂ ಹೆಚ್ಚು ಸ್ಲಂ ಸಮುದಾಯ,ದುಡಿಯುವ, ಕಾರ್ಮಿಕ, ಅಸಂಘಟಿತ ಕಾರ್ಮಿಕರು ಒತ್ತಾಯಿಸಿದ್ದಾರೆ.
ಇಂದು ಬೆಂಗಳೂರಿನ ನೂರಕ್ಕೂ ಹೆಚ್ಚು ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು. ನಂತರ ಆಯುಕ್ತರಾದ ವಿ.ವಿ. ಜ್ಯೋತ್ಸ್ನಾ ಅವರನ್ನು ಭೇಟಿಯಾಗಿ ತಮಗಾಗುತ್ತಿರುವ ನೋವನ್ನು ವಿವರಿಸಿದರು.
ಇತ್ತೀಚೆಗೆ ನಗರದ ಅನೇಕ ನ್ಯಾಯಬೆಲೆ ಅಂಗಡಿಗಳ ಹೊರಗಡೆ ಪ್ರದರ್ಶಿಸಲಾಗಿರುವ ಪಡಿತರ ಪಟ್ಟಿ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಮಾರ್ಪಡಿಸುವ ಕುರಿತು ಅಂಗಡಿದಾರರಿಂದ ನೀಡಲಾಗುತ್ತಿರುವ ಮಾಹಿತಿಯಿಂದ ಬಡಜನರಲ್ಲಿ ಆತಂಕ ಉಂಟಾಗಿದೆ. ಮಾಸಿಕ ಆದಾಯವು ಹತ್ತು ಸಾವಿರ ರೂ.ಗಿಂತ ಹೆಚ್ಚು ಇರುವವರು ಸೇರಿದಂತೆ ಅನೇಕ ಕಾರಣಗಳಿಂದ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸಂಘಟನೆಯ ಸದಸ್ಯರು ದೂರಿದರು.
ಸಂಘಟನೆಯ ಅನೇಕರು ತಮ್ಮ ವೈಯಕ್ತಿಕ ಉದಾಹರಣೆಗಳನ್ನು ಆಯುಕ್ತರ ಗಮನಕ್ಕೆ ತಂದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮುನಿಯಮ್ಮ ಅವರಿಗೆ ಇಂದಿಗೂ ಬಿಪಿಎಲ್ ಕಾರ್ಡ್ ಸಿಗದಿರುವುದು, ಶಿಫ್ಟ್ಗಳಲ್ಲಿ ಅಸ್ಥಿರ ಆದಾಯ ಹೊಂದಿರುವ ಕಾರ್ಮಿಕರ ಕಾರ್ಡ್ಗಳನ್ನು ಕೇವಲ ಬ್ಯಾಂಕ್ ದಾಖಲೆ ಅಥವಾ ಒಂದೇ ಬಾರಿ ಟ್ಯಾಕ್ಸ್ ರಿಟರ್ನ್ ಸಲ್ಲಿಸಿರುವ ಕಾರಣದಿಂದ ಎಪಿಎಲ್ಗೆ ಪರಿವರ್ತಿಸುವುದು, ವಯೋವೃದ್ಧರು ಬಯೋಮೆಟ್ರಿಕ್ ಸಮಸ್ಯೆಯಿಂದಾಗಿ ಪಡಿತರ ಪಡೆಯದಿದ್ದರೆ ಅವರಿಗೆ ಅನರ್ಹತೆಯನ್ನು ವಿಧಿಸುವುದು ಮುಂತಾದ ಅನೇಕ ಅನ್ಯಾಯಗಳ ಬಗ್ಗೆ ಜನತೆ ಕಳವಳ ವ್ಯಕ್ತಪಡಿಸಿದರು. ಹೌಸ್ಕೀಪಿಂಗ್ ಸೇರಿದಂತೆ ಅನಿಯಮಿತ ಕೆಲಸಗಾರರು ಕೆಲವು ತಿಂಗಳು ಪಡಿತರ ಪಡೆಯದಿದ್ದರೆ ಅವರ ಕಾರ್ಡ್ಗಳನ್ನು ರದ್ದುಪಡಿಸಿರುವ ಬಗ್ಗೆ ಅಹವಾಲುಗಳನ್ನು ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?
ಪ್ರತಿಭಟನಾಕಾರರ ಮಾತುಗಳನ್ನು ಆಲಿಸಿದ ಆಯುಕ್ತರಾದ ವಿ.ವಿ. ಜ್ಯೋತ್ಸ್ನಾ, ಪ್ರಸ್ತುತ ನಡೆಯುತ್ತಿರುವುದು ಕೇವಲ ಪರಿಶೀಲನೆ ಪ್ರಕ್ರಿಯೆಯಾಗಿದ್ದು, ಅರ್ಹ ಬಿಪಿಎಲ್ ಕಾರ್ಡ್ಗಳನ್ನು ತಕ್ಷಣವೇ ರದ್ದುಪಡಿಸಲಾಗುವುದಿಲ್ಲವೆಂದು ಭರವಸೆ ನೀಡಿದರು. ಜೊತೆಗೆ, ಅನರ್ಹ ಪಟ್ಟಿಗೆ ಸೇರಿಸಿರುವ ಕುಟುಂಬಗಳು ಇಲಾಖೆಗೆ ದೂರು ಸಲ್ಲಿಸಬಹುದೆಂದು ತಿಳಿಸಿದರು. ಈ ಸಲಹೆಯಂತೆ 25ಕ್ಕೂ ಹೆಚ್ಚು ಮಂದಿ ತಕ್ಷಣವೇ ತಮ್ಮ ಅಹವಾಲುಗಳನ್ನು ಇಲಾಖೆಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಗಳು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮಂಡಿಸಿದವು. ಜನರಿಗೆ ಪೂರ್ವ ಮಾಹಿತಿ ನೀಡದೆ, ಸೂಕ್ತ ಸಮಯಾವಕಾಶವಿಲ್ಲದೆ ಬಿಪಿಎಲ್ ಕಾರ್ಡ್ ರದ್ದತಿ ಆದೇಶ ಹೊರಡಿಸಿರುವ ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು; ಬಿಪಿಎಲ್ ಕಾರ್ಡ್ ಅನರ್ಹ ಪಟ್ಟಿಯ ಪರಿಶೀಲನೆ ದಿನಾಂಕವನ್ನು ತಕ್ಷಣವೇ ರದ್ದುಪಡಿಸಬೇಕು; ಸರ್ಕಾರ ನಿಗದಿಪಡಿಸಿರುವ ಆದಾಯ ಮಿತಿ ಹಾಗೂ ಇತರೆ ಮಾನದಂಡಗಳ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು; ಸ್ಥಳೀಯ ಮಟ್ಟದಲ್ಲಿ ಅರ್ಹ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲಿಸಬೇಕು; ಹಾಗೂ 2017ರಿಂದ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ನಿರಾಕರಿಸಲ್ಪಟ್ಟ ಬಡಕುಟುಂಬಗಳ ಅರ್ಜಿಗಳನ್ನು ಪುನರ್ ಪರಿಶೀಲಿಸಿ ನ್ಯಾಯಯುತ ಆದಾಯ ಮಿತಿಯನ್ನು ನಿಗದಿಪಡಿಸಿ ಅವರಿಗೂ ಸಹ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಬಡಜನರ ಬದುಕು, ಆಹಾರ ಭದ್ರತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಂಘಟನೆಗಳ ಸದಸ್ಯರು ಸರ್ಕಾರಕ್ಕೆ ಮನವರಿಕೆ ಮಾಡಿದವು. ಹಾಗೆಯೇ ಬಿಪಿಎಲ್ ಕಾರ್ಡ್ಗಳನ್ನು ಅನ್ಯಾಯವಾಗಿ ರದ್ದುಪಡಿಸುವ ಕ್ರಮ ಮುಂದುವರಿದರೆ ವ್ಯಾಪಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.