ಗಡಿಭಾಗದ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿ ಜಿ.ಬಿ.ವಿಸಾಜಿ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನ ರೆಡ್ಡಿ ಹೇಳಿದರು.
ಭಾಲ್ಕಿ ತಾಲೂಕಿನ ತಳವಾಡ(ಕೆ) ಗ್ರಾಮದ ಅಲ್ಲಮ ಪ್ರಭು ಬಿ.ಇಡಿ ಕಾಲೇಜಿನಲ್ಲಿ ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಜಿ.ಬಿ.ವಿಸಾಜಿ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼಹಿರೇಮಠ ಸಂಸ್ಥಾನದ ಧಾರ್ಮಿಕ, ಶೈಕ್ಷಣಿಕ, ಸಾಹಿತಿಕ ಕಾರ್ಯಕ್ರಮಗಳಲ್ಲಿ ಹಿರಿಯ ಸಾಹಿತಿ ಜಿ.ಬಿ.ವಿಸಾಜಿ ಅವರ ಸೇವೆ ವಿಶಿಷ್ಟವಾಗಿ ಇರುತ್ತಿತ್ತು. ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಕಾಯಕ ಪರಿಣಾಮಿ, ಭಾಲ್ಕಿ ಇತಿಹಾಸ ಸೇರಿ ಮುಂತಾದ ಪುಸ್ತಕ ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಉತ್ತಮ ಸಾಹಿತ್ಯ ಪಟು ಆಗಿದ್ದರಿಂದ ಕನ್ನಡ ಭಾಷೆಯ
ಮೇಲೆ ಪ್ರಭುತ್ವ ಸಾಧಿಸಿದ್ದರು. ಅವರ ಸರಳ ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆʼ ಎಂದು ತಿಳಿಸಿದರು.
ʼಸಾಹಿತಿ ಜಿ.ಬಿ.ವಿಸಾಜಿ ಅವರ ಮಾರ್ಗದರ್ಶನದಲ್ಲಿ 15 ಪುಸ್ತಕಗಳನ್ನು ಬರೆಯಲು ಸಾಧ್ಯವಾಗಿದೆ. ಅವರು ಒಬ್ಬ ಕನ್ನಡದ ಭೀಷ್ಮರಾಗಿದ್ದರುʼ ಎಂದು ಹಿರಿಯ ಸಾಹಿತಿ ಗಣಪತಿ ಭೂರೆ ತಿಳಿಸಿದರು.
ಶಬನಮ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಮಕ್ತುಂಬಿ ಮಾತನಾಡಿ, ʼವಿದ್ಯಾರ್ಥಿಗಳಲ್ಲಿ ಗುರು ಭಕ್ತಿ ಹೆಚ್ಚಾಗಬೇಕು. ಜಿ.ಬಿ.ವಿಸಾಜಿ ಅವರ ಪ್ರೇರಣೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅವರ ಬದುಕು-ಬರಹ ನಮಗೆ ಸ್ಫೂರ್ತಿಯಾಗಬೇಕುʼ ಎಂದರು.
ಪ್ರಾಚಾರ್ಯ ಪಾಂಡುರಂಗ ಕುಂಬಾರ್ ಮಾತನಾಡಿ, ʼಚನ್ನಬಸವ ಪಟ್ಟದೇವರು ಕನ್ನಡಕ್ಕಾಗಿ ದುಡಿದು ಕನ್ನಡ ಮಠ ಕಟ್ಟಿದರು. ಅದನ್ನು ಬಸವಲಿಂಗ ಪಟ್ಟದ್ದೆವರು ಮುಂದುವರಿಸಿದ್ದಾರೆ. ಹಿರೇಮಠ ಪರಿಸರದಲ್ಲಿ ಇಂತಹ ಸಾಹಿತಿಗಳು ಬೆಳೆಯಲು ಸಾಧ್ಯವಾಗಿದೆ. ಜೀವನದಲ್ಲಿ ನಿರಂತರ ಅಧ್ಯಯನ ಮುಖ್ಯ, ಪಾಠದೊಂದಿಗೆ ಸಾಹಿತ್ಯ ಓದಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಮಾಣಿಕರಾವ ಪಾಂಚಾಳ ಸ್ವಾಗತಿಸಿದರು. ರಾಜೇಂದ್ರ ವರವಟ್ಟೆ ನಿರೂಪಿದರು. ಅರ್ಚನಾ ವಂದಿಸಿದರು.