ಭಟ್ಕಳ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಅವರಿಗೆ ಮತ್ತೆ ಕರ್ನಾಟಕದ ಮೀನುಗಾರಿಕೆ ಮತ್ತು ಬಂದರು ಖಾತೆಯ ಜವಾಬ್ದಾರಿಯನ್ನು ನೀಡುವ ಮೂಲಕ ಜನಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಭಟ್ಕಳ ಮೋಗೇರ ಸಮಾಜ ಹಾಗೂ ವಿವಿಧ ಮೀನುಗಾರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಮೋಗೇರ ಸಮಾಜ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೋಗೇರ, ಮಾಜಿ ಸಚಿವ ಮಂಕಾಳ ವೈದ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಪರ ಆಡಳಿತ ನೀಡಿದ್ದಾರೆ
ಕರಾವಳಿ ಭಾಗದ ಬಂದರುಗಳ ಅಭಿವೃದ್ಧಿ, ಸಣ್ಣ ಬಂದರುಗಳ ಉನ್ನತೀಕರಣ, ಮೀನುಗಾರರ ಸಮಸ್ಯೆಗಳ ಪರಿಹಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಪರಿಣಾಮಕಾರಿ ಕೆಲಸ ಮಾಡಿದ್ದು, ಮೀನುಗಾರ ಸಮುದಾಯದ ವಿಶ್ವಾಸ ಗಳಿಸಿದ್ದರು. ಮೀನುಗಾರಿಕೆಯಲ್ಲಿ ತೊಡಗಿರುವ ವೇಳೆ ಸಂಭವಿಸುವ ಅಪಘಾತಗಳು, ಪ್ರಾಣಹಾನಿ, ಬೋಟ್ ಹಾಗೂ ದೋಣಿಗಳ ಮುಳುಗು ಪ್ರಕರಣಗಳಲ್ಲಿ ತ್ವರಿತವಾಗಿ ಸ್ಪಂದಿಸಿ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಶೀಘ್ರವಾಗಿ ತಲುಪುವಂತೆ ಕ್ರಮ ಕೈಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಗೋವನ್ನು ರಕ್ಷಿಸಲು ಮುಂದಾದ ಮುಸ್ಲಿಂ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ
ಕಾಂಗ್ರೆಸ್ ಸರ್ಕಾರವು ಈ ಹಿಂದೆಯೂ ಸಣ್ಣ ಸಮುದಾಯಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಪಾಲಿಸಿದೆ. ಇದೇ ಪರಂಪರೆಯನ್ನು ಮುಂದುವರಿಸಿ, ಮಂಕಾಳ ವೈದ್ಯ ಅವರಿಗೆ ಮತ್ತೊಮ್ಮೆ ಮೀನುಗಾರಿಕೆ ಮತ್ತು ಬಂದರು ಖಾತೆ ನೀಡಬೇಕು ಎಂದು ಮೋಗೇರ ಸಮಾಜ ಹಾಗೂ ಮೀನುಗಾರ ಸಂಘಟನೆಗಳ ಪರವಾಗಿ ಮನವಿ ಮಾಡಿದರು.
ಮೋಗೇರ ಸಮಾಜದ ಉಪಾಧ್ಯಕ್ಷ ಭಾಸ್ಕರ ಮೋಗೇರ ಬೆಳಕೆ ಮಾತನಾಡಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವಲ್ಲಿ ಮಂಕಾಳ ವೈದ್ಯ ಅವರು ತೋರಿದ ಬದ್ಧತೆ ಗಮನಾರ್ಹವಾಗಿದೆ. ಈ ಸಂಬಂಧ ಸಮಾಜದ ನಿಯೋಗವು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೋಗೇರ ಸಮಾಜದ ಕಾರ್ಯದರ್ಶಿ ಭಾಸ್ಕರ ದೈಮನೆ, ಖಜಾಂಚಿ ನಾರಾಯಣ ಚೊಬ್ಬಿಮನೆ, ಮೋಗೇರ ಹೋರಾಟ ಸಮಿತಿ ಅಧ್ಯಕ್ಷ ಎಫ್.ಕೆ. ಮೋಗೇರ, ಸಮಾಜದ ಮುಖಂಡ ದೇವಿದಾಸ ಮೋಗೇರ, ಮೋಗೇರ ಸಮಾಜದ ನೌಕರರ ಮತ್ತು ಪದವೀಧರರ ಸಂಘದ ಅಧ್ಯಕ್ಷ ವಿ.ಡಿ. ಮೋಗೇರ, ತೆಂಗಿನಗುಂಡಿ ಹಾಗೂ ಅಳ್ವೆಕೋಡಿ ಪರ್ಶಿಯನ್ ಬೋಟ್ ಯೂನಿಯನ್ ಅಧ್ಯಕ್ಷ ವೆಂಕಟರಮಣ ಸಣ್ಣಿಮನೆ, ವಕೀಲ ನಾಗರಾಜ ಈ.ಎಚ್., ಶ್ರೀ ಲಕ್ಷ್ಮೀ ಸರಸ್ವತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಮೋಗೇರ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.





