ʼಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ಕಪಡೆ ಮಹಿಳಾ ಸಿಬ್ಬಂದಿಯವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸದಾ ಸಿದ್ದರಾಗಿದ್ದೇವೆʼ ಎಂದು ಸಂತಪೂರ ಪೋಲಿಸ್ ಠಾಣೆಯ ಅಕ್ಕಪಡೆಯ ಸಿಬ್ಬಂದಿ ಮೀನಾಕ್ಷಿ ನಾಗೂರಕರ್ ಹೇಳಿದರು.
ಗುರುವಾರ ಅವರು ತಾಲೂಕಿನ ವಡಗಾಂವ್ (ದೆ ) ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಸಂತಪುರ ಪೊಲೀಸ್ ಠಾಣೆಯ ಅಕ್ಕಪಡೆಯ ಪೊಲೀಸ್ ಸಿಬ್ಬಂದಿಗಳಿಂದ ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಯುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕಪಡೆಯ ಮಹಿಳಾ ಪೊಲೀಸ್ ತಂಡದವರು ವಿದ್ಯಾರ್ಥಿನಿಯರ ರಕ್ಷಣೆಗೆ ಸದಾ ಕಾಲ ಇರುತ್ತೇವೆ. ಯಾವುದೇ ತೊಂದರೆಗಳಾದರೂ ನಮಗೆ ತಿಳಿಸಬಹುದು. ಯಾವುದೇ ಕಾರಣಕ್ಕೂ ಭಯಪಡುವಾಗ ಅಗತ್ಯವಿಲ್ಲವೆಂದು ಮಕ್ಕಳಿಗೆ ಜಾಗೃತಿ ಮೂಡಿಸಿದರು.
ಅಕ್ಕಪಡೆಯ ಇನ್ನೊರ್ವ ಸಿಬ್ಬಂದಿ ಅನಿತಾ ಜೂಕಾಲೆ ಮಾತನಾಡಿ, ʼಹೆಣ್ಣು ಮಕ್ಕಳ ರಕ್ಷಣೆಗಾಗಿ ಅಕ್ಕಪಡೆ ತಂಡವನ್ನು ರಚಿಸಲಾಗಿದ್ದು, ಪುಂಡಪೋಕರಿಗಳಿಗೆ ಸಿಂಹ ಸ್ವಪ್ನರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳು ಯಾವುದೇ ರೀತಿಯ ಸಮಸ್ಯೆಗಳಿದ್ದರೆ ನಮ್ಮ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕ ಮಾಡಬಹುದುʼ ಎಂದು ತಿಳಿಸಿದರು.
ಇದನ್ನೂ ಓದಿ : ಯಾದಗಿರಿ | ಪೊಲೀಸ್ ಪೇದೆ, ಆತನ ಸಹೋದರನಿಂದ ಮಹಿಳೆ ಮೇಲೆ ಅತ್ಯಾಚಾರ : ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಹನುಮಂತರಾಯ, ಶಿಕ್ಷಕರಾದ ಭಾರತಬಾಯಿ, ಶೇಷಪ್ಪ, ಅಪ್ಸಾನ ಬೇಗಂ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.