ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹುಲಸೂರ ತಾಲೂಕಿನ ಗ್ರಾಮವೊಂದರ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೂರು ವರ್ಷಗಳ ಹಿಂದೆ ಹುಲಸೂರ ತಾಲ್ಲೂಕಿನ ದೇವನಾಳ ಗ್ರಾಮದ ತುಕಾರಾಮ ಎನ್ನುವವರ ಜೊತೆಗೆ ಮದುವೆಯಾಗಿದೆ. ಮದುವೆಯಾದ ನಂತರ ₹10 ಲಕ್ಷ ವರದಕ್ಷಿಣೆ ತರುವಂತೆ ಗಂಡ, ಮಾವ, ಅತ್ತೆ, ಮೈದುನ ಸೇರಿದಂತೆ ಮನೆಯವರೆಲ್ಲರೂ ಪೀಡಿಸುತ್ತಿದ್ದರುʼ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ʼವರದಕ್ಷಿಣೆ ತರುವಂತೆ ಗಂಡ, ಮಾವ, ಮೈದುನ ಸೇರಿ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದಿದ್ದಾರೆ. ₹10 ಲಕ್ಷ ವರದಕ್ಷಿಣೆ ತರದಿದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆʼ ಎಂದು ಉಲ್ಲೇಖಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಮೇರೆಗೆ ಗಂಡ ತುಕಾರಾಮ ಮೇತ್ರೆ, ಮಾವ ವೆಂಕಟರಾವ ಮೇತ್ರೆ, ಅತ್ತೆ ಶ್ರೀದೇವಿ ಸೇರಿ ಒಟ್ಟು ಆರು ಮಂದಿ ವಿರುದ್ಧ ಕಲಂ 85, 126(2), 115(2), 352, 351(2)(3), 190 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಹಾಗೂ 4ರಡಿ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆರೋಪ : ಇಬ್ಬರು ಪಿಡಿಒ ಅಮಾನತು