ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಸೇತುವೆ, ಶಾಲೆ, ಅಂಗನವಾಡಿ, ರೈತರ ಬೆಳೆಹಾಗೂ ಸರಕಾರಿ ಕಚೇರಿಗೆ ದುರಸ್ತಿಗೆ ₹300 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನಿವೃತ್ತ ಸಿಎಂ ಅಪರ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ ಶಿಂಧೆ ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು. ʼಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆಯನ್ನು ನಡೆಸಿರುವುದು ಸ್ವಾಗತಿಸಿದ ಅವರು, ʼಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ, ಚರಂಡಿ ಹಾಗೂ ಸೇತುವೆ ಅಪಾರ ಪ್ರಮಾಣ ಹಾನಿ ದುರಸ್ತಿ ಮಾಡುವುದು ಅಗತ್ಯವಾಗಿದೆʼ ಎಂದು ತಿಳಿಸಿದರು.
ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆದಿದ್ದ ಅಪಾರ ಪ್ರಮಾಣ ಉದ್ದು, ಹೆಸರು, ಸೋಯಾ, ತೊಗರಿ, ಹತ್ತಿ ಇತರೆ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕೆರೆಗಳು ಒಡೆದು ಜಮೀನಿಗೆ ನೀರು ನುಗ್ಗಿದ್ದು ಸೇರಿದಂತೆ ರೈತರ ಬವಣೆ ಕುರಿತು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿ, ಶೀಘ್ರದಲ್ಲಿ ಪರಿಹಾರ ನೀಡುವಂತೆ ಮನವರಿಕೆ ಮಾಡಿದ್ದೇನೆʼ ಎಂದರು.
ಅತಿವೃಷ್ಟಿಯಿಂದ ಸಾವಿರಾರು ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಗರಿಷ್ಠ ಮೊತ್ತದ ಪರಿಹಾರ ಧನವನ್ನು ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶಿಂಧೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ ಜಿಲ್ಲೆಯಲ್ಲಿ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ