ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರೆ ನೀಡಿದ ಬೀದರ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿತು.
ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯಿಂದ ಗುರುವಾರ ಕರೆ ನೀಡಿರುವ ಬೀದರ್ ಬಂದ್‌ಗೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.
ನಗರದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿದ್ದವು. ಹೋಟೆಲ್, ರೆಸ್ಟೋರೆಂಟ್, ಶಾಲೆ, ಕಾಲೇಜುಗಳು, ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಸಂಚಾರವೂ ಇರಲಿಲ್ಲ. ಬೆಳ್ಳಿಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲಿಸಿದರು. ಆಟೊ, ದ್ವಿಚಕ್ರ ವಾಹನ, ಕಾರು ಓಡಾಟ ವಿರಳವಾಗಿತ್ತು.

ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ ವಿವಿಧ ಸಂಘಟನೆಗಳ ಹೋರಾಟಗಾರರು, ಬೈಕ್‌ಗಳಿಗೆ ನೀಲಿ ಧ್ವಜ ಕಟ್ಟಿಕೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿ ಬಂದ್‌ಗೆ ಬೆಂಬಲಿಸಲು ಕೋರಿದರು.
ನೌಬಾದ್ ಬಸವೇಶ್ವರ ವೃತ್ತದಲ್ಲಿ ಅಮಿತ್ ಶಾ ಅವರ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದ ವಿವಿಧ ತಾಲ್ಲೂಕಗಳಿಂದ ಅಂಬೇಡ್ಕರ್ ವೃತ್ತದಲ್ಲಿ ಆಗಮಿಸಿದ ಮಕ್ಕಳು, ಮಹಿಳೆಯರು, ಹೋರಾಟಗಾರರು ಕೈಯಲ್ಲಿ ನೀಲಿ ಬಾವುಟ, ಸಂವಿಧಾನ ಪೀಠಿಕೆ, ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದುಕೊಂಡು ಗಮನ ಸೆಳೆದರು. ಡಾ.ಅಂಬೇಡ್ಕರ್ ವೃತ್ತದಲ್ಲಿ ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ತುಳಿದು ಬಳಿಕ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ʼಜೈಭೀಮ್ʼ, ಜೈ ಸಂವಿಧಾನ, ಹಾಗೂ ‘ಸತ್ತಾನಪ್ಪೊ ಸತ್ತಾನೊ ಅಮಿತ್ ಶಾ ಸತ್ತಾನೋʼ ಎಂಬ ಘೋಷಣೆ ಕೂಗಿ ಬೊಬ್ಬೆ ಹಾಕಿದರು.
ಪ್ರತಿಭಟನಾ ವೇದಿಕೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ಕ್ರಾಂತಿ ಗೀತೆಗಳ ಮೂಲಕ ಅಮಿತ್ ಶಾ, ಬಿಜೆಪಿಗೆ ತಿರುಗೇಟು ನೀಡಿದರು.
ಚಿಂತಕ ಶಿವಶರಣಪ್ಪ ಹುಗ್ಗೆ ಪಾಟೀಲ್ ಮಾತನಾಡಿ, ‘ಇಡೀ ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಶಾ ಹೇಳಿಕೆ ತೀವ್ರ ಖಂಡನೀಯವಾಗಿದೆ. ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ‘ಚಲೋ ಪಾರ್ಲಿಮೆಂಟ್’ ಹೋರಾಟಕ್ಕೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

ಹಿರಿಯ ಚಿಂತಕ ವಿಠ್ಠಲದಾಸ ಪ್ಯಾಗೆ ಮಾತನಾಡಿ, ‘ದೇಶದ ಜನರನ್ನು ವರ್ಣವ್ಯವಸ್ಥೆ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ದೇವರಿಗಿಂತ ದೊಡ್ಡ ಸ್ಥಾನದಲ್ಲಿದ್ದಾರೆ. ನಮಗೆ ಸ್ವರ್ಗದ ಅಗತ್ಯವಿಲ್ಲ. ನಮಗೆ ಎಲ್ಲವೂ ಅಂಬೇಡ್ಕರ್ ಸಂವಿಧಾನ ನೀಡಿದೆ. ಅಂಬೇಡ್ಕರ್ ಅಂದ್ರೆ ಫ್ಯಾಷನ್ ಅಲ್ಲ, ಅಂಬೇಡ್ಕರ್ ಎಂಬುದು ನಮ್ಮ ಪ್ಯಾಷನ್ ಇದೆ. ಅನ್ಯಾಯ ಸರಿಪಡಿಸದಿದ್ದರೆ ಭೀಮಾ ಕೋರೆಗಾಂವ್ ರೀತಿಯಲ್ಲಿ ಹೋರಾಟ ರೂಪಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗುವುದುʼ ಎಂದು ಎಚ್ಚರಿಸಿದರು.
ಮಾಜಿ ಜಿ.ಪಂ.ಸದಸ್ಯೆ ಗೀತಾ ಪಂಡಿತ ಚಿದ್ರಿ ಮಾತನಾಡಿ, ‘ಡಾ.ಅಂಬೇಡ್ಕರ್ ಅವರು ನಮ್ಮೆಲ್ಲರ ಕೈಗೆ ಸಂವಿಧಾನ ಕೊಟ್ಟು ಹಣೆಬರಹ ಬರೆದಿದ್ದಾರೆ. ಸಂವಿಧಾನ ಇರದಿದ್ದರೆ ಸಗಣಿ ತೆಗೆಯುವ ಕೆಲಸ ಮಾಡಬೇಕಿತ್ತು. ಅಮಿತ್ ಶಾ ಅವರಿಗೆ ಡಾ.ಅಂಬೇಡ್ಕರ್ ಅವರ ಬಗ್ಗೆ ಕೀಳಾಗಿ ಮಾತಾಡುವ ಯಾವ ನೈತಿಕತೆಯೂ ಇಲ್ಲ. ತಕ್ಷಣವೇ ರಾಜೀನಾಮೆ ನೀಡಿ, ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಪ್ರದೀಪ ಜಂಜೀರೆ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇರುವವರೆಗೆ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಾಗಿದೆ’ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಉಮೇಶಕುಮಾರ್ ಸ್ವಾರಳ್ಳಿಕರ್ ಮಾತನಾಡಿ, ʼರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರದೊಳಗೆ ಕ್ಷಮೆಯಾಚಿಸಬೇಕು, ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿ.24ರಂದು ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಅಮಿತ್ ಶಾ ಕ್ಷಮೆಯಾಚಿಸಿಲ್ಲ, ರಾಜೀನಾಮೆ ನೀಡಿಲ್ಲ. ಹೀಗಾಗಿ ಬೀದರ್ ಬಂದ್‌ಗೆ ಕರೆ ನೀಡಿ ಮತ್ತೊಮ್ಮೆ ಅಮಿತ್ ಶಾ ವಜಾಕ್ಕೆ ಆಗ್ರಹಿಸುತ್ತಿದ್ದೇವೆʼ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್ ಜೋಳದಾಬಕೆ, ರಾಹುಲ್ ಖಂದಾರೆ, ಸುರೇಶ ಶಿಂಧೆ, ಅಬ್ದುಲ್ ಅಜೀಜ್ ಮುನ್ನಾ, ಗೌತಮ್ ಚವ್ಹಾಣ, ಕಪೀಲ್ ಗೋಡಬೋಲೆ, ಸುರೇಶ್ ಸಿಂಧೆ, ಅಮೃತ ಮೋಳಕೆರೆ, ವಿಲಾಸ್‌ರಾವ್ ಮೋರೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.
‘ಭಾರತೀಯ ಸಂವಿಧಾನದಿಂದಲೇ ಸಂಸತ್ ಪ್ರವೇಶಿಸಿ ಗೃಹ ಮಂತ್ರಿಯಾದ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದು ದೇಶದ ಕೋಟಿ ಕೋಟಿ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟಾಗಿದೆ. ಜಾತಿವಾದಿ ಮನಸ್ಥಿತಿಯ ಅಮಿತ್ ಶಾ ಅಧಿಕಾರ ದರ್ಪದಿಂದ ಬಾಬಾ ಸಾಹೇಬ್‌ರನ್ನು ಅಪಮಾನಿಸಿ ದೇಶದ್ರೋಹ ಕೃತ್ಯ ಎಸಗಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕು ಕಲ್ಪಿಸಿದ ಅಂಬೇಡ್ಕರ್ ಅವರ ಅಪಮಾನ ಎಂದಿಗೂ ಸಹಿಸಲಾಗದುʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಪುಟದಲ್ಲಿ ಮಂದುವರೆಯಲು ಯಾವ ನೈತಿಕತೆಯೂ ಇಲ್ಲ. ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕುʼ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.
ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಮುಖಾಂತರ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಬೃಹತ್ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗ್ಗೆಯಿಂದಲೇ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ | ಬೆಳ್ಳಂ ಬೆಳಿಗ್ಗೆಯೇ ಶುರುವಾದ ಪ್ರತಿಭಟನೆ : ಸಂಪೂರ್ಣ ಸ್ತಬ್ಧ
ಪ್ರತಿಭಟನೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಚಂದ್ರಕಾಂತ ನಿರಾಟೆ, ಕಲ್ಯಾಣರಾವ ಭೋಸ್ಲೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಗೋರನಾಳಕರ್, ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಅಭಿ ಕಾಳೆ, ಉಪಾಧ್ಯಕ್ಷರಾದ ಅಂಬರೀಶ ಕುದುರೆ, ರಾಜಕುಮಾರ್ ಡೊಂಗರೆ, ಸಂಜುಕುಮಾರ್ ಮೇತ್ರೆ, ರಾಜಕುಮಾರ್ ಗುನ್ನಳ್ಳಿಕರ್ ಸೇರಿದಂತೆ ಸರಫರಾಜ್ ಹಾಸ್ಮಿ, ಮುಬಶೀರ್ ಸಿಂಧೆ, ಸೈಯದ್ ವಹೀದ್ ಲಖನ್, ಬಾಬುರಾವ್ ಹೊನ್ನಾ, ವಿನಯಕುಮಾರ್ ಮಾಳಗೆ, ಪವನ ಮಿಠಾರೆ, ವಿನೋದ್ ರತ್ನಾಕರ್, ಹರ್ಷಿತ್ ದಾಂಡೇಕರ್, ಪ್ರಕಾಶ ರಾವಣ, ರಾಹುಲ್ ಡಾಂಗೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
