ಹನ್ನೆರಡನೆಯ ಶತಮಾನದ ಬಸವಾದಿ ಶರಣರು ನುಡಿ ವೀರರು ಅಷ್ಟೇ ಅಲ್ಲದೆ ನಡೆ ಸಿದ್ಧಾಂತದ ವೀರರಾಗಿದ್ದರು ಎಂದು ಡಾ.ವಿಜಯಶ್ರೀ ಬಶೆಟ್ಟಿ ನುಡಿದರು
ಬೀದರ್‌ನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವಚನಾಮೃತ ಕನ್ನಡ ಸಂಘದಿಂದ ಈಚೆಗೆ ಆಯೋಜಿಸಿದ್ದ ಶಿವಶರಣೆ ಬೊಂತಾದೇವಿ ಹಾಗೂ ಶಿವಶರಣ ಮರುಳ ಶಂಕರದೇವ ಕುರಿತಾದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸಮಾಜದಲ್ಲಿ ರಾಜಪ್ರಭುತ್ವ, ಪ್ರಜಾಪ್ರಭುತ್ವ ನಂತರ ಈಗ ಪ್ರಜ್ಞಾಪ್ರಭುತ್ವ ಬರಬೇಕಾದ ಅವಶ್ಯಕತೆ ಇದೆʼ ಎಂದರು.
ಶಿವಶರಣೆ ಬೊಂತಾದೇವಿ ಅವರ ಬದುಕು-ಬರಹ ಕುರಿತು ಜಯದೇವಿ ಯದಲಾಪುರೆ ಅವರು ಮಾತನಾಡಿ, ʼ12ನೇ ಶತಮಾನದಲ್ಲಿ ಬಸವಣ್ಣವರ ಕೀರ್ತಿ ಕಾಶ್ಮೀರದ ರಾಜ ಮನೆತನದ ಬೊಂತಾದೇವಿಗೆ ತಲುಪಿ ರಾಜವೈಭವ ಬದಿಗೊತ್ತಿ ಕಲ್ಯಾಣದ ಕಡೆ ಮುಖ ಮಾಡಿದರುʼ ಎಂದು ಹೇಳಿದರು.
ʼಬೊಂತಾದೇವಿ ಅವರ ಮೂಲ ಹೆಸರು ʼನಿಜದೇವಿʼ ಎಂಬ ಹೆಸರು ಪಡೆದ ಬೊಂತಾದೇವಿ ಕಲ್ಯಾಣಕ್ಕೆ ಬಂದು ಶರಣ ಸಂಕುಲದೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ವಚನಗಳನ್ನು ರಚಿಸಿದರು. ಅವರು ಬರೆದ ಆರು ವಚನ ಮಾತ್ರ ಲಭ್ಯವಾಗಿವೆ. ಸಮಾನತೆಯ ಸಮಾಜದ ಕನಸು ಕಂಡಿದ್ದ ಅವರು ತಮ್ಮ ವಚನಗಳಲ್ಲಿ ಬೇಧ-ಭಾವ ತೊಡೆದು ಸಮಾನತೆ ಸಮಾಜದಿಂದ ನೆಮ್ಮದಿ ಕಾಣಲು ಸಾಧ್ಯವೆಂಬ ವಿಚಾರ ಮಂಡಿಸಿದರುʼ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರು ಮಾತನಾಡಿ, ʼಶರಣ ಮರುಳಶಂಕರದೇವರು 35 ವಚನಗಳನ್ನು ರಚಿಸಿದ್ದಾರೆ. ಅವರು ಬಸವಣ್ಣನವರ ಮಹಾಮನೆಯಲ್ಲಿ ಬರುವ ಅತಿಥಿಗಳಿಗೆ ಉಣ ಬಡಿಸುವ ಕಾಯಕ ಮಾಡುತ್ತಿದ್ದರು. ಮರುಳು ಶಂಕರದೇವರ ಘನ ವ್ಯಕ್ತಿತ್ವವನ್ನು ಅಲ್ಲಮಪ್ರಭುಗಳಿಗೆ ಪರಿಚಯವಾದ ಬಳಿಕ ಅವರನ್ನು ಅನುಭವ ಮಂಟಪದ ಸದಸ್ಯರನ್ನಾಗಿಸಿದರುʼ ಎಂದು ಹೇಳಿದರು.
ಬರುವ ನವೆಂಬರ್ 22 ಮತ್ತು 23 ರಂದು ಬೀದರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ʼವಚನ ಸಾಹಿತ್ಯೋತ್ಸವʼ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಇಳಿಮುಖ
ಮುಖ್ಯ ಅತಿಥಿಗಾಳಗಿ ಭಾಗ್ಯಲಕ್ಷ್ಮಿ ಗುರುಮೂರ್ತಿ, ಸಿದ್ದಪ್ಪಾ ಜ್ಯಾಂತೆ ಹಾಗೂ ಕನ್ನಡ, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ರೇಣುಕಾ ಎನ್.ಬಿ, ರೇಣುಕಾ ಮಳ್ಳಿ ಅವರು ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕ ಬಸವರಾಜ ಬಿರಾದಾರ ನಿರೂಪಿಸಿದರು. ಅಂಬಿಕಾ ಬಿರಾದಾರ ಸ್ವಾಗತಿಸಿದರು. ಶ್ರೀಕಾಂತ ಬಿರಾದಾರ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪ್ರವೀಣ ಮ್ಯೂಜಿಕ್ ಅಕಾಡೆಮಿಯ ಮಕ್ಕಳು ನಾಡಗೀತೆ ಹಾಡಿದರು.